ಕಾವೇರಿ ನದಿ ಸಂರಕ್ಷಣೆಗೆ ಕೈಜೋಡಿಸಿ : ಶ್ರೀವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರ ಕರೆ

08/12/2020

ಮಡಿಕೇರಿ ಡಿ.7 : ದಕ್ಷಿಣ ಭಾರತದ ಪ್ರಮುಖ ನದಿಯಾಗಿರುವ ಕಾವೇರಿ ಕೋಟ್ಯಾಂತರ ಜನರ ಬದುಕಿಗೆ ಆಧಾರವಾಗಿದ್ದು ನದಿಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದು ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಮಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು ಕರೆ ನೀಡಿದ್ದಾರೆ.
ಅವರು ಕುಶಾಲನಗರದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನದಿಯನ್ನು ತಾಯಿಯಂತೆ ಪೂಜ್ಯ ಭಾವನೆಯಿಂದ ನೋಡಿಕೊಳ್ಳಬೇಕು. ಸ್ವಚ್ಚತೆಗೆ ಆದ್ಯತೆ ನೀಡುವುದರೊಂದಿಗೆ ನದಿ ಹರಿಯುವ ಎಲ್ಲಾ ಭಾಗದಲ್ಲಿಯೂ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ನದಿಯ ಬಗ್ಗೆ ಜಾಗೃತಿ, ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಶ್ರೀಗಳು ಹೇಳಿದರು.
ಇದೇ ಸಂದರ್ಭ ಸ್ಥಳೀಯ ಮಾಧ್ಯಮ ಕೇಂದ್ರವೊಂದಕ್ಕೆ ಭೇಟಿ ನೀಡಿದ ಶ್ರೀಗಳು ಪತ್ರಿಕೆ ಮಾಧ್ಯಮಗಳ ಬಗ್ಗೆ ಪ್ರತಿಕ್ರಿಯಿಸಿ, ಸಮಾಜದಲ್ಲಿ ವ್ಯವಸ್ಥೆಗಳ ಬದಲಾವಣೆಗೆ ಪ್ರಮುಖ ಕೊಂಡಿಯಾಗಿ ಪತ್ರಿಕೆ ಮಾಧ್ಯಮಗಳು ಕೆಲಸ ನಿರ್ವಹಿಸಬೇಕಾಗುತ್ತದೆ ಎಂದರು. ಮಾಧ್ಯಮಗಳು ವಸ್ತುಸ್ಥಿತಿ, ನೈಜಾಂಶ ಜನರಿಗೆ ನೀಡುವ ಮೂಲಕ ಸಮಾಜದ ಏಳಿಗೆಯಲ್ಲಿ ಪ್ರತ್ಯೇಕ ಪಾತ್ರ ವಹಿಸುತ್ತದೆ ಎಂದರು.