ಕಾಯ್ದೆಯನ್ನು ಮತ್ತೆ ಸಮರ್ಥಿಸಿಕೊಂಡ ಮೋದಿ

08/12/2020

ನವದೆಹಲಿ ಡಿ.8 : ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಕಳೆದ 11 ದಿನಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಭಾರತ್ ಬಂದ್ ಗೆ ಕರೆ ನೀಡಿದ ಬೆನ್ನಲ್ಲೇ, ಕಾಯ್ದೆಯನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಹೊಸ ಸೌಲಭ್ಯಗಳು ಮತ್ತು ವ್ಯವಸ್ಥೆಗಳಿಗೆ ಸುಧಾರಣೆಗಳು ಅತಿ ಮುಖ್ಯ ಎಂದಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಆಗ್ರಾ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ. ಹಿಂದಿನ ಶತಮಾನದ ಕಾಯ್ದೆಗಳನ್ನು ಆಧರಿಸಿ ಹೊಸ ಶತಮಾನ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹಿಂದಿನ ಶತಮಾನದಲ್ಲಿ ಉಪಯುಕ್ತವಾಗಿದ್ದ ಕಾಯ್ದೆ ಮುಂದಿನ ಶತಮಾನಕ್ಕೆ ಹೊರೆಯಾಗಬಹುದು. ಆದ್ದರಿಂದ ಸುಧಾರಣೆಯ ಪ್ರಕ್ರಿಯೆ ಮುಂದುವರಿಯಬೇಕು ಎಂದಿದ್ದಾರೆ.
ನಮ್ಮ ಸರ್ಕಾರ ಸಮಗ್ರ ಸುಧಾರಣೆಗಳನ್ನು” ತರುತ್ತಿದೆ. ಈ ಮೊದಲು, ಸುಧಾರಣೆಗಳು ಕೆಲವು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದವು ಅಥವಾ ಕೆಲವು ವಲಯಗಳು ಮತ್ತು ಇಲಾಖೆಗಳನ್ನು ಗಮನದಲ್ಲಿರಿಸಿಕೊಂಡು ತರಲಾಗಿತ್ತು ಎಂದು ಪ್ರಧಾನಿ ಹೇಳಿದ್ದಾರೆ.