ಮೇಲ್ಮನೆಯಲ್ಲಿ ಅಶ್ವಥ್, ವಿಶ್ವನಾಥ್ ಜಟಾಪಟಿ

08/12/2020

ಬೆಂಗಳೂರು ಡಿ.8 : ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವಾಗಿ ಮೇಲ್ಮನೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಹಾಗೂ ಮೇಲ್ಮನೆ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ನಡುವೆ ಮಾತಿನ ಜಟಾಪಟಿ ನಡೆಯಿತು.
ಇದರಿಂದ ಆಡಳಿತ ಪಕ್ಷಕ್ಕೆ ಮುಜುಗರವನ್ನುಂಟು ಮಾಡುವ ಸಂದರ್ಭವೂ ಸೃಷ್ಟಿಯಾಗಿತು. ವಿಶ್ವನಾಥ್ ಮಾತಿಗೆ ಜೆಡಿಎಸ್ ಸದಸ್ಯರು ಬೆಂಬಲ ಸೂಚಿಸಿದ್ದು ಸದನದಲ್ಲಿ ರಾಜಕೀಯ ಚರ್ಚೆಗೂ ಕಾರಣವಾಯಿತು.
ಸಂತಾಪ ಸೂಚನೆ ಬಳಿಕ ಮುಂದೂಡಿಕೆಯಾಗಿದ್ದ ಸದನ ಮತ್ತೆ ಸಮಾವೇಶಗೊಳ್ಳುತ್ತಿದ್ದಂತೆಯೇ ಬಿಜೆಪಿಯ ಹೆಚ್.ವಿಶ್ವನಾಥ್, ಕೇಂದ್ರ ಸರ್ಕಾರದ ಉದ್ದೇಶಿತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುವ ಕುರಿತು ಪ್ರಸ್ತಾಪಿಸಿದರು. ಉನ್ನತ ಶಿಕ್ಷಣ ಇಲಾಖೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಇದಕ್ಕೆ 15 ಜನರ ಸಮಿತಿ ರಚಿಸಿದೆ. ಆ ಸಮಿತಿಯಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಕಾನೂನುಬಾಹಿರ ಎಂದರು. ಇದಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು.
ಕೆಫೆ ಕಾಫಿ ಡೇ ಮಾಜಿ ಅಧ್ಯಕ್ಷ ಎಸ್.ವಿ ರಂಗನಾಥ್ ಅವರು ಅಪರಾಧ ಮಾಡಿದ ಸಂಸ್ಥೆಯಲ್ಲಿದ್ದವರು. ಅಪರಾಧದಲ್ಲಿ ಭಾಗಿಯಾದ ವ್ಯಕ್ತಿಯನ್ನು ತಂದು ಅಧ್ಯಕ್ಷರನ್ನಾಗಿ ಮಾಡಿದ್ದೇಕೆ? ರಾಜ್ಯದಲ್ಲಿ ಬೇರೆ ಶಿಕ್ಷಣ ತಜ್ಞರಿಲ್ಲವೇ ಎಂದು ಪ್ರಶ್ನಿಸಿದರು.