ಪ್ರತಿಭಟನೆಗಳು ರಾಜಕೀಯ ಪ್ರೇರಿತ : ಬಿಜೆಪಿ ರೈತ ಮೋರ್ಚಾ ಆರೋಪ : ಕೃಷಿ ಕಾಯ್ದೆ ಕುರಿತು ಸಮರ್ಥನೆ

December 8, 2020

ಮಡಿಕೇರಿ ಡಿ.8 : ದೇಶದ ರೈತಾಪಿ ವರ್ಗದ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತವೆಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ.ಬಿ.ಸಿ.ನವೀನ್ ಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತ ಸಂಘಟನೆಗಳ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ನೂತನ ಕೃಷಿ ಕಾಯ್ದೆಗಳನ್ನು ಅಧ್ಯಯನ ಮಾಡಿಲ್ಲವೆಂದು ಅಭಿಪ್ರಾಯಪಟ್ಟರು.
ಕೇಂದ್ರದ ನಿಲುವುಗಳನ್ನು ವಿರೋಧಿಸುವುದಕ್ಕಾಗಿಯೇ ಬಂದ್ ಗೆ ಕರೆ ನೀಡಿರುವ ವಿವಿಧ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷ ಕ್ಲುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.
ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಮುಕ್ತ ಅವಕಾಶ ನೀಡಲಾಗಿದೆ. ದೇಶದಲ್ಲಿ ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರು ಶೇ.85 ರಷ್ಟಿದ್ದು, ಇವರುಗಳು ಕೃಷಿ ಉದ್ಯಮಿಗಳಾಗಿ ಅಭಿವೃದ್ಧಿ ಹೊಂದಲು ಅನುಕೂಲ ಕಲ್ಪಿಸಲಾಗಿದೆ. ಸಣ್ಣ ರೈತರು ಅಭ್ಯುದಯ ಹೊಂದದೆ ಕೂಲಿ ಕಾರ್ಮಿಕರಾಗಿಯೇ ಉಳಿಯಬೇಕೆನ್ನುವುದು ಕಾಂಗ್ರೆಸ್ ಉದ್ದೇಶವೇ ಎಂದು ಪ್ರಶ್ನಿಸಿದ ಡಾ.ನವೀನ್ ಕುಮಾರ್, ವಿರೋಧ ವ್ಯಕ್ತಪಡಿಸುವವರು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದರು.
ಸುಮಾರು 10 ಸಾವಿರ ರೈತ ಉತ್ಪಾದನಾ ಕೇಂದ್ರಗಳ ಮೂಲಕ ರೈತ ಗುಂಪುಗಳು ಉದ್ಯಮಿಗಳಾಗಿ ಮಾರ್ಪಡಲು ಯೋಜನೆ ರೂಪಿಸಲಾಗಿದೆ. ರೈತರು ಹಾಗೂ ಗ್ರಾಹಕರಿಗೆ ಕೇಂದ್ರದ ಕಾಯ್ದೆ ಅನುಕೂಲಕರವಾಗಿದೆ, ಆದರೆ ಮಧ್ಯವರ್ತಿಗಳಿಗೆ ಇದರಿಂದ ತೊಂದರೆಯಾಗಿದೆ. ಕಾಂಗ್ರೆಸ್ ಹಾಗೂ ಪ್ರತಿಭಟನಾಕಾರರು ಮಧ್ಯವರ್ತಿಗಳ ಪರವಾಗಿದ್ದಾರೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರದ ನೂತನ ಕಾಯ್ದೆಯಿಂದ ಕೃಷಿ ಕ್ಷೇತ್ರ ದೇಶದ ಜಿಡಿಪಿಗೆ ಶೇ.34 ರಷ್ಟು ಕೊಡುಗೆಯನ್ನು ನೀಡಿದಂತ್ತಾಗುತ್ತದೆ.
ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಪರಿವರ್ತಿಸಲಾಗುತ್ತದೆ ಎನ್ನುವ ತಪ್ಪು ಅಭಿಪ್ರಾಯಗಳನ್ನು ಮೂಡಿಸಲಾಗುತ್ತಿದೆ. ಆದರೆ ಎಲ್ಲಾ ಕೃಷಿ ಭೂಮಿಗಳನ್ನು ಪರಿವರ್ತಿಸಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ಡಾ.ನವೀನ್ ಕುಮಾರ್ ಸ್ಪಷ್ಟಪಡಿಸಿದರು.
ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಮಾತನಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತ, ಸೈನಿಕ ಹಾಗೂ ಕಾರ್ಮಿಕ ಪರ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದು, 2014 ರಿಂದಲೇ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ವಿರೋಧ ಮಾಡುವುದಕ್ಕಾಗಿಯೇ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಆರೋಪಿಸಿದರು.
ರೈತರ ಹೆಸರನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ ಅವರು, 2005 ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗ ಅಂದಿನ ಸಚಿವ ಶರದ್ ಪವಾರ್ ಅವರು ಎಪಿಎಂಸಿ ಕಾಯ್ದೆ ರದ್ದು ಪಡಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಅದೇ ಕಾಂಗ್ರೆಸ್ ಇಂದು ರೈತಪರವಾದ ಕಾಯ್ದೆಯನ್ನು ವಿರೋಧಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಮೋರ್ಚಾದ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೃಷಿ ಸುಧಾರಣೆಗೆ ಮೂರು ಮಹತ್ವದ ಮಸೂದೆಗಳನ್ನು ಕೇಂದ್ರ ಅನುಷ್ಠಾನಕ್ಕೆ ತಂದಿದೆ ಎಂದರು.
ಯೂರಿಯಾ ಗೊಬ್ಬರದ ದುರುಪಯೋಗ ಸಂಪೂರ್ಣವಾಗಿ ನಿಂತಿದೆ. ದೇಶದ ಸುಮಾರು 18 ಸಾವಿರ ಹಳ್ಳಿಗಳು ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂ ವಿದ್ಯುತ್ ಸಂಪರ್ಕ ಪಡೆದಿರಲಿಲ್ಲ. ಪ್ರಸ್ತುತ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ನೀಡಲಾಗಿದೆ. ಕಿಸಾನ್ ಕಾರ್ಡ್‍ಗಳ ವಿತರಣೆಯ ಮೂಲಕ ರೈತರಿಗೆ ಬ್ಯಾಂಕ್ ಸೌಲಭ್ಯಗಳ ಆವಕಾಶಗಳನ್ನು ವಿಸ್ತರಣೆ ಮಾಡಲಾಗಿದೆ. ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಈಗಾಗಲೇ ಆರು ಬೃಹತ್ ರಸಗೂಬ್ಬರ ಉತ್ತರ ಘಟಕಗಳ ಸ್ಥಾಪನೆಗೆ 48 ಸಾವಿರ ಕೋಟಿ ಬಂಡವಾಳ ಹೂಡಲಾಗಿದ.
ರೈತರ ಪಂಪ್ ಸೆಟ್‍ಗಳಿಗೆ ಸೋಲಾರ್ ವಿದ್ಯುತ್ ಜೋಡಣೆ ಮಾಡಿ ಅನುಕೂಲ ಕಲ್ಪಿಸಲಾಗಿದೆ. ಆತ್ಮ ನಿರ್ಭರ ಭಾರತ ಯೋಜನೆಯಡಿಯಲ್ಲಿ ರೂ.1 ಲಕ್ಷ ಕೋಟಿ ಮೊತ್ತವನ್ನು ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಈ ಎಲ್ಲ ಪ್ರಯತ್ನಗಳಿಂದಾಗಿ 2014ರಲ್ಲಿ ಮಿಲಿಯ ಟನ್‍ನಷ್ಟಿದ್ದ ಅಹಾರ ಧಾನ್ಯಗಳ ಉತ್ಪಾದನೆ 2020 ರ ವೇಳೆಗೆ ದಾಖಲೆ ಮಟ್ಟದ 291 ಮಿಲಿಯ ಟನ್‍ಗೇರಿದೆ. ಇಳುವರಿ ಹೆಚ್ಚಳದಿಂದ ಸುಮಾರು ಶೇಕಡಾ 20 ರಿಂದ 30 ರಷ್ಟು ಆದಾಯ ಹೆಚ್ಚಳವೂ ಸಾಧ್ಯವಾಗಲಿದೆ. ಕೃಷಿ ಉತ್ತನ್ನ ದಾಸ್ತಾನು ಮತ್ತು ಕೃಷಿ ಮಾರುಕಟ್ಟೆ ಸಮಿತಿಗಳ ಏಕಸ್ವಾಮ್ಯವನ್ನು (ಎಪಿಎಂಸಿ) ತಪ್ಪಿಸುವ ಉದ್ದೇಶದಿಂದ ಈ ಕೃಷಿ ಸುಧಾರಣಾ ಮಸೂದೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ನಾಗೇಶ್ ಕುಂದಲ್ಪಾಡಿ ಮಾಹಿತಿ ನೀಡಿದರು.
ದೇಶಾದ್ಯಂತ ವಿರೋಧ ಪಕ್ಷಗಳು ಸೋಲಿನ ಹತಾಶೆಯಿಂದ ರೈತರನ್ನು ಕೇಂದ್ರ ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದರು.
ಬಿಜೆಪಿ ಸದಾ ರೈತರ ಪರವಾಗಿದ್ದು, ಕೃಷಿಕರ ಸಮಸ್ಯೆಗಳ ಪರಿಹಾರಕ್ಕೆ ಕಟಿಬದ್ಧವಾಗಿದೆ. ನೀಡಿದ ಭರವಸೆಯಂತೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರರುಗಳಾದ ವಿ.ಜೆ.ದೀಪಕ್ ಹಾಗೂ ಸುವಿನ್ ಗಣಪತಿ ಉಪಸ್ಥಿತರಿದ್ದರು.

error: Content is protected !!