ಕೃಷಿ ಕಾಯ್ದೆ ವಿರುದ್ಧ ಮಡಿಕೇರಿಯಲ್ಲಿ ಎಸ್‍ಡಿಪಿಐ ಪ್ರತಿಭಟನೆ

08/12/2020

ಮಡಿಕೇರಿ ಡಿ.8 : ದೇಶದ ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ಭಾರತ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‍ಡಿಪಿಐ) ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರ ಇಂದಿರಾ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮಾತನಾಡಿ, ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾಯ್ದೆಯಿಂದಾಗಿ ರೈತಾಪಿ ವರ್ಗಕ್ಕೆ ಘೋರ ಅನ್ಯಾಯವಾಗಲಿದೆ ಎಂದರು. ದೇಶದ ಬೆನ್ನೆಲುಬು ಆಗಿರುವ ರೈತರ ವಿರುದ್ಧದ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ರೈತರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಆರೋಪಿಸಿದರು.
ಇಂತಹ ಕಾಯ್ದೆಯನ್ನು ಜಾರಿಗೆ ತರುವ ಮುನ್ನ ಯಾವುದೇ ಚರ್ಚೆಗಳಿಲ್ಲದೆ, ಇದರ ಸಾಧಕ-ಬಾಧಕಗಳನ್ನು ಅವಲೋಕಿಸದೆ, ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದು, ಸರ್ಕಾರದ ಈ ನಡವಳಿಕೆ ಖಂಡನೀಯ ಎಂದರು.
ಕೋವಿಡ್‍ನಿಂದಾಗಿ ದೇಶದ ಆರ್ಥಿಕ ಕ್ಷೇತ್ರದಲ್ಲಿ ವೈಫಲ್ಯವನ್ನೇ ಕಾಣುತ್ತಿರುವ ಕೇಂದ್ರ ಸರ್ಕಾರ ರೈತರು ಹಾಗೂ ಬೆಳೆಗಾರರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಟೀಕಿಸಿದರು. ರೈತ ವಿರೋಧಿ ಕೃಷಿ ಮಸೂದೆಯನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಮನ್ಸೂರ್ ಮಾತನಾಡಿ, ಕೋವಿಡ್‍ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ರೈತರ, ಬೆಳೆಗಾರರ ನೆರವಿಗೆ ಬರಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ಮಸೂದೆ ಕಾಯ್ದೆಯನ್ನು ಜಾರಿಗೆ ತಂದು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ಎಲ್ಲವನ್ನು ಖಾಸಗೀಕರಣ ಮಾಡಲು ಹೊರಟಿರುವುದು ಖಂಡನೀಯ ಎಂದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸಮಿತಿ ಸದಸ್ಯ ಅಮಿನ್ ಮೊಹ್ಸಿನ್, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಡ್ಕರ್, ಸಹಕಾರ್ಯದರ್ಶಿ ಜಲೀಲ್, ಪ್ರಮುಖರಾದ ಶೌಕತ್ ಆಲಿ ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.