ಮುಖ್ಯಮಂತ್ರಿಗಳ ಎನ್.ಸಿ.ಸಿ. ಪ್ರಶಂಸಾ ಪದಕ ಪಡೆದ ಕ್ಯಾ. ಬಿ.ಎಂ. ಗಣೇಶ್

December 8, 2020

ಮಡಿಕೇರಿ ಡಿ.8 : ರಾಷ್ಟ್ರೀಯ ಯುವ ಸೈನಿಕ ದಳದಲ್ಲಿ (ಎನ್.ಸಿ.ಸಿ) ಕಳೆದ ಹಲವು ವರ್ಷಗಳಿಂದ ತೋರಿದ ಅದ್ವಿತೀಯ ಸಾಧನೆಗಾಗಿ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಸ್ಕೂಲ್ ನ ಎನ್.ಸಿ.ಸಿ ಅಧಿಕಾರಿ ಕ್ಯಾಪ್ಟನ್ ಬಿ.ಎಂ. ಗಣೇಶ್ ಅವರು 2019-20ನೇ ಸಾಲಿನ ಮುಖ್ಯಮಂತ್ರಿಗಳ ‘ಎನ್.ಸಿ.ಸಿ ಪ್ರಶಂಸನಾ ಪದಕ’ ಪಡೆದಿದ್ದಾರೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಈ ಪದಕ ಘೋಷಣೆಯಾಗಿ ಬೆಂಗಳೂರಿನಲ್ಲಿ ವಿತರಣಾ ಕಾರ್ಯಕ್ರಮ ನಿಗದಿಯಾಗಿದ್ದರೂ ಕೆಲ ತಾಂತ್ರಿಕ ಕಾರಣಗಳಿಂದ ಅದು ನೆರವೇರಲಿಲ್ಲ. ಈ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿರುವ ಎನ್.ಸಿ.ಸಿ 19ನೇ ಕರ್ನಾಟಕ ಬೆಟಾಲಿಯನ್ ನ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಎನ್.ಸಿ.ಸಿ 19ನೇ ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಚೇತನ್ ಧಿಮೊನ್ ಅವರು ಮುಖ್ಯಮಂತ್ರಿಗಳ ಪ್ರಶಂಸನಾ ಪದಕವನ್ನು ಕ್ಯಾಪ್ಟನ್ ಬಿ.ಎಂ. ಗಣೇಶ್ ಅವರಿಗೆ ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ಎನ್.ಸಿ.ಸಿ ಕೇಂದ್ರ ಕಛೇರಿಯ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಎನ್.ಎಸ್ . ಬೇಡಿ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.

ಕಳೆದ 15 ವರ್ಷಗಳಿಂದ ಎನ್.ಸಿ.ಸಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ಯಾ. ಗಣೇಶ್ ಅವರು 2017-18 ನೇ ಸಾಲಿನಲ್ಲಿ ಕರ್ನಾಟಕ-ಗೋವಾ ನಿರ್ದೇಶನಾಲಯದ ಡೆಪ್ಯೂಟಿ ಡೈರೆಕ್ಟರ್ ಜನರಲ್ ಅವರ ಪ್ರತಿಷ್ಠಿತ ರಾಜ್ಯಮಟ್ಟದ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಎನ್.ಸಿ.ಸಿ ಯಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿರುವ ಕ್ಯಾ. ಬಿ. ಎಂ. ಗಣೇಶ್ ಅವರಿಗೆ 2013- 14ನೇ ಸಾಲಿನ ರಕ್ಷಣಾ ಇಲಾಖೆಯ ತರಬೇತಿ ಕೇಂದ್ರದ ‘ರಾಷ್ಟ್ರ ಜ್ಯೋತಿ’ ಪುರಸ್ಕಾರವು ಲಭಿಸಿದೆ. ಮಹಾರಾಷ್ಟ್ರದ ನಾಗಪುರದಲ್ಲಿರುವ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ ನಡೆದ ಸ್ಪರ್ಧೆಯಲ್ಲಿ ‘ಬೆಸ್ಟ್ ಶೂಟರ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಗಣೇಶ್ ಅವರು 2013ರಲ್ಲಿ ಮಡಿಕೇರಿಯಲ್ಲಿ ನಡೆದ ಎನ್.ಸಿ.ಸಿ ರಾಷ್ಟ್ರೀಯ ಭಾವೈಕ್ಯತೆಯ ಶಿಬಿರದಲ್ಲಿ ‘ಅತ್ಯುತ್ತಮ ಎನ್.ಸಿ.ಸಿ ಅಧಿಕಾರಿ’ ಎಂಬ ಬಿರುದನ್ನು ತಮ್ಮದಾಗಿಸಿಕೊಂಡಿದ್ದರು.

ಹಲವು ಎನ್.ಸಿ.ಸಿ ಶಿಬಿರದಲ್ಲಿ ಭಾಗವಹಿಸಿದ ಅನುಭವ ಪಡೆದಿರುವ ಕ್ಯಾ. ಗಣೇಶ್ ಅವರು, ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಸ್ಥಾಪಕ ಉಪಾಧ್ಯಕ್ಷರಾಗಿದ್ದಾರೆ. ಯುವ ನಾಯಕರ ಮತ್ತು ಉದ್ಯಮಶೀಲರ ಒಕ್ಕೂಟವಾದ ಜೇಸಿಸ್ ನಲ್ಲಿ ತೋರಿದ ಸಾಧನೆಯಿಂದಾಗಿ 2012ರಲ್ಲಿ ‘ಅತ್ಯುತ್ತಮ ಜೇಸಿ’ ಎಂಬ ವಲಯ ಪ್ರಶಸ್ತಿಯೂ ಇವರಿಗೆ ಸಂದಿದೆ. ಮೂಲತಹ ಪೊನ್ನಂಪೇಟೆಯ ಕ್ಯಾ. ಗಣೇಶ್ ಅವರು ನಿವೃತ್ತ ಅರಣ್ಯಾಧಿಕಾರಿ ಬಿ.ಪಿ. ಮುತ್ತಪ್ಪ ಅವರ ಪುತ್ರರಾಗಿದ್ದಾರೆ.

error: Content is protected !!