ರೈತಪರ ಸಂಘಟನೆಗಳಿಂದ ಕುಶಾಲನಗರದಲ್ಲಿ ಪ್ರತಿಭಟನೆ

09/12/2020

ಮಡಿಕೇರಿ, ಡಿ.8: ಕುಶಾಲನಗರದಲ್ಲಿ ಭಾರತ್ ಬಂದ್‍ಗೆ ಯಾವುದೇ ರೀತಿಯ ಸ್ಪಂದನೆ ದೊರಕದೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತಾದರು, ರೈತಪರ ಸಂಘಟನೆಗಳು ಮತ್ತು ಕಾಂಗ್ರೆಸ್‍ನಿಂದ ಪ್ರತಿಭಟನೆ ನಡೆಯಿತು.
ಬಂದ್ ಕರೆ ಹಿನ್ನಲೆಯಲ್ಲಿ ಕುಶಾಲನಗರದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಕೆಲವು ರೈತಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪ್ರತಿಭಟನೆ ನಡೆಯಿತು. ಕುಶಾಲನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ನೆರೆದ ಪ್ರತಿಭಟನಾಕಾರರು ಕೇಂದ್ರದ ತಿದ್ದುಪಡಿ ಮಸೂದೆ ವಿರುದ್ಧ ಆಕ್ರೋಷ ವ್ಯಕ್ತಪಡಿಸಿ ಧಿಕ್ಕಾರ ಕೂಗಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಇಂಟೆಕ್ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ರೈತರ ಬಗ್ಗೆ ಕಾಳಜಿ ಇಲ್ಲದೆ ಐಷಾರಾಮಿ ಜೀವನ ನಡೆಸುವ ಕೇಂದ್ರ ರಾಜ್ಯ ಸರಕಾರಗಳ ನಿಲುವನ್ನು ಖಂಡಿಸಿದರು. ಸಿಐಟಿಯು ಪ್ರಮುಖ ಭರತ್, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ರೈತರ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಸಂವಿಧಾನ ನೀತಿ ನಿಯಮಗಳನ್ನು ಗಾಳಿಗೆ ತೂರಿ ರೈತ ಮಸೂದೆಗಳನ್ನು ತಿದ್ದುಪಡಿಗೊಳಿಸಿ ಬಂಡವಾಳಶಾಹಿಗಳ ಪರವಹಿಸಿ ಕೇಂದ್ರ ಸರಕಾರ ರೈತರಿಗೆ ಅನ್ಯಾಯ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ರೈತ ಸಂಘದ ಪ್ರಮುಖ ನಿರ್ವಾಣಪ್ಪ ಮಾತನಾಡಿದರು.ಸಿಐಟಿಯು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಪಿಐಎಂಎಲ್, ಐಎನ್‍ಟಿಯುಸಿ, ದಲಿತ ಸಂಘರ್ಷ ಸಮಿತಿ, ಎಐಟಿಯುಸಿ, ರಾಜ್ಯ ರೈತ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಪ್ರಮುಖರಾದ ಗೋವಿಂದರಾಜ್‍ದಾಸ್, ಕೆ.ಆರ್.ಜಗದೀಶ್, ಕೆ.ಬಿ.ರಾಜು ಸೇರಿದಂತೆ ಕಾರ್ಯಕರ್ತರು, ಸದಸ್ಯರು ಇದ್ದರು.