ಜೀವಿಜಯ ಕಾಂಗ್ರೆಸ್ ಸೇರ್ಪಡೆಯಿಂದ ಜೆಡಿಎಸ್‍ಗೆ ನಷ್ಟವಿಲ್ಲ : ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್

09/12/2020

ಸೋಮವಾರಪೇಟೆ ಡಿ. 9 : ಜೆಡಿಎಸ್ ಮುಖಂಡರಾಗಿದ್ದ ಬಿ.ಎ.ಜೀವಿಜಯ ಕಾಂಗ್ರೆಸ್ ಸೇರ್ಪಡೆಯಿಂದ ಜೆಡಿಎಸ್‍ಗೆ ಯಾವುದೇ ನಷ್ಟವಿಲ್ಲ. ಜೀವಿಜಯ ಅವರ ಜೊತೆಯಲ್ಲಿ ಕಾರ್ಯಕರ್ತರು ಹೋಗುವುದಿಲ್ಲ. ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ.ಗಣೇಶ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠವಾಗುತ್ತಿದೆ. ಜೀವಿಜಯ ಅವರ ಜೊತೆ ಪಕ್ಷದ ನಾಯಕರು ಹೋದರೆ ಅಂತಹವರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಎಚ್ಚರಿಸಿದರು.
ನಾಯಕರಿಲ್ಲದೆ ಹೀನಾಯ ಸ್ಥಿತಿಯಲ್ಲಿರುವ ಕಾಂಗ್ರೆಸ್‍ನ್ನು ಸೇರಿರುವ ಜೀವಿಜಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟ್ ಸಿಗದಿದ್ದಾಗ ಮತ್ತೆ ಜೆಡಿಎಸ್ ಕದ ತಟ್ಟಿದರೆ ಯಾವುದೇ ಕಾರಣಕ್ಕೂ ಸೇರಿಸುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಡಿಕೇರಿ ಕ್ಷೇತ್ರದಲ್ಲಿ 750 ಮಂದಿ ಜೆಡಿಎಸ್ ಬೆಂಬಲಿಗರು ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. 400 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿಯವರು 14 ತಿಂಗಳು ಮುಖ್ಯಮಂತ್ರಿಯಾಗಿದ್ದ ಸಂದರ್ಭ ರೈತರ 1 ಲಕ್ಷ ರೂ.ಗಳ ಸಾಲಮನ್ನಾ ಮಾಡಿ, ರೈತರ ಕಷ್ಟಕ್ಕೆ ಆಸರೆಯಾಗಿದ್ದಾರೆ. ವೃದ್ದಾಪ್ಯವೇತನ, ವಿಧವಾವೇತನ, ಅಂಗವಿಕಲವೇತನ ಮೊತ್ತವನ್ನು ಹೆಚ್ಚಿಸಿದ್ದಾರೆ. ಪ್ರಕೃತಿ ವಿಕೋಪ ಸಂತ್ರಸ್ಥರಿಗೆ 840 ಮನೆಗಳನ್ನು ನಿರ್ಮಿಸಲು ಅನುದಾನ ಕಲ್ಪಿಸಿದ್ದಾರೆ. ಇಂತಹ ಸಾಧನೆಯನ್ನೇ ಹೇಳಿ ಮತ ಯಾಚಿಸುತ್ತೇವೆ ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ಜೆಡಿಎಸ್ ಬಿ. ಟೀಮ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುತ್ತಿರಬಹುದು. ಆದರೆ ಮೂಲ ಜೆಡಿಎಸ್ ನೇರವಾಗಿ ಸ್ಪರ್ಧಿಸಲಿದೆ. ನಿಷ್ಕ್ರೀಯವಾಗಿರುವ ಕಾಂಗ್ರೆಸ್ ಮತ್ತು ರೈತರ ಮರಣ ಶಾಸನಗಳನ್ನು ಜಾರಿಗೆ ತಂದಿರುವ ಬಿಜೆಪಿ ವಿರುದ್ಧ ಚುನಾವಣೆಯಲ್ಲಿ ಹೋರಾಟ ಮುಂದುವರಿಲಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕೃಷಿ ಮಸೂದೆಗಳ ಮೂಲಕ ರೈತರ ಕಗ್ಗೊಲೆಗೆ ಮುಂದಾಗಿದೆ. ರೈತರ ರಕ್ಷಣೆ ಮಾಡುತ್ತಿದ್ದ ಸಹಕಾರ ಸಂಘಗಳನ್ನು ನಾಶ ಮಾಡಲು ಕಾಯ್ದೆ ರೂಪಿಸಿದ್ದಾರೆ. ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗುವುದನ್ನು ತಡೆದಿದ್ದಾರೆ. ರೈತರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲು ತಂತ್ರ ರೂಪಿಸುತ್ತಿದ್ದಾರೆ. ಬಡವರಿಗೆ ಸಿಗಬೇಕಾದ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ. ಇನ್ನಿತರ ಅನ್ಯಾಯಗಳನ್ನು ಮಾಡುತ್ತಿರುವ ಬಿಜೆಪಿ ಪಕ್ಷವನ್ನು ಗ್ರಾಮೀಣ ಜನರು ಕ್ಷಮಿಸುವುದಿಲ್ಲ ಎಂದು ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್ ಹೇಳಿದರು. ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಇಲ್ಲಿನ ಶಾಸಕರಿಗೆ ಅರಿವಿಲ್ಲ. ಹಳ್ಳಿಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಗ್ರಾಮೀಣ ರಸ್ತೆಗಳು ಗುಂಡಿಮಯವಾಗಿವೆ ಎಂದು ದೂರಿದರು. ಜೀವಿಜಯ ಅವರು ಪಕ್ಷ ತೊರೆದರೂ ಕಾರ್ಯಕರ್ತರು ಧೃತಿಗೇಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಸಿ.ಎಸ್.ನಾಗರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ತಮ್ಮಯ್ಯ, ಪ್ರಮುಖರಾದ ಕೆ.ಟಿ.ಪರಮೇಶ್ ಇದ್ದರು.