ಡಿ.15ರಿಂದ ಪೊನ್ನಂಪೇಟೆಯಲ್ಲಿ ಸಿ.ಪಿ.ಹೆಚ್.ಎಲ್- 2020 ಹಾಕಿ ಪಂದ್ಯಾವಳಿ

December 9, 2020

ಪೊನ್ನಂಪೇಟೆ, ಡಿ.9: ಕೊಡಗು ಜಿಲ್ಲೆಯಲ್ಲೆ ಇದೇ ಮೊದಲ ಬಾರಿಗೆ ಪುರುಷರಿಗಾಗಿ ‘ಕೂರ್ಗ್ ಪ್ರೀಮಿಯರ್ ಹಾಕಿ ಲೀಗ್-2020 (ಸಿ.ಪಿ.ಹೆಚ್.ಎಲ್)’ ಪಂದ್ಯಾವಳಿಯನ್ನು ಇದೇ ತಿಂಗಳ 15 ರಿಂದ 20 ರವರೆಗೆ ಆಯೋಜಿಸಲಾಗಿದೆ. ಈ ಪಂದ್ಯಾವಳಿಯು ಹಾಕಿ ಕೂರ್ಗ್ ಸಂಸ್ಥೆಯ ಸಹಯೋಗದಲ್ಲಿ ಪೊನ್ನಂಪೇಟೆಯ ಹಾಕಿ ಟರ್ಫ್ ಕ್ರೀಡಾಂಗಣದಲ್ಲಿ 5 ದಿನಗಳ ಕಾಲ ಜರುಗಲಿದೆ ಎಂದು ಸಿ.ಪಿ.ಹೆಚ್.ಎಲ್. ಆಯೋಜನಾ ಸಮಿತಿ ಅಧ್ಯಕ್ಷರಾದ ಬುಟ್ಟಿಯಂಡ ಎ. ಚಂಗಪ್ಪ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾವಳಿಯು ಮೊದಲ ಹಂತದಲ್ಲಿ ಮಾತ್ರ ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಉಳಿದೆಲ್ಲ ಸುತ್ತಿನಲ್ಲಿ ನಾಕ್ಔಟ್ ಮಾದರಿ ಅಳವಡಿಕೆಯಾಗಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 5 ತಂಡಗಳು ಮಾತ್ರ ಭಾಗವಹಿಸಲಿದ್ದು, ತಂಡ ಗರಿಷ್ಠ ತಲಾ 18 ಆಟಗಾರರನ್ನು ಹೊಂದಬಹುದಾಗಿದೆ. ಸಿ.ಪಿ.ಹೆಚ್.ಎಲ್ -2020ಗಾಗಿ ರಾಜ್ಯ, ಅಂತರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿರುವ ಮೂಲತಹ ಕೊಡಗಿನ 90 ಆಟಗಾರರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ತಂಡಗಳಿಗೆ ಆಟಗಾರರನ್ನು ಆಯ್ಕೆಗೊಳಿಸಲು ಡಿ.10ರಂದು ಗುರುವಾರ (ಇಂದು) ಗೋಣಿಕೊಪ್ಪಲಿನಲ್ಲಿ ಆಟಗಾರರ ಬಿಡ್ಡಿಂಗ್ ನಡೆಯಲಿದೆ ಎಂದು ಚಂಗಪ್ಪ ಅವರು ಮಾಹಿತಿ ನೀಡಿದರು.

ಪಂದ್ಯಾವಳಿ ಆಯೋಜನಾ ಸಮಿತಿಯ ಮುಖ್ಯಸ್ಥ ಮೂಕಚಂಡ ನಾಚಪ್ಪ ಮಾತನಾಡಿ, ಸಿ.ಪಿ.ಹೆಚ್.ಎಲ್ -2020 ಗಾಗಿ ಆಯ್ದ ಮಾಲೀಕರ ಒಡೆತನದಲ್ಲಿ 5 ಹಾಕಿ ತಂಡಗಳು ಸಿದ್ಧಗೊಂಡಿದೆ. ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರ ಮಾಲೀಕತ್ವದ ಗೋಣಿಕೊಪ್ಪಲಿನ ‘ಸೌತ್ ಕೂರ್ಗ್ ಕ್ಲಬ್’, ಅಂತರಾಷ್ಟ್ರೀಯ ಖ್ಯಾತಿಯ ಮಾಜಿ ರಗ್ಭಿ ಆಟಗಾರ ಮಾದಂಡ ಪಿ. ತಿಮ್ಮಯ್ಯ ಮಾಲೀಕತ್ವದ ವಿರಾಜಪೇಟೆಯ ‘ಪ್ರಗತಿ ಸ್ಪೋರ್ಟ್ಸ್ ಅಕಾಡೆಮಿ’, ಬೆಂಗಳೂರಿನ ಗುಮ್ಮಟ್ಟೀರ ಮುತ್ತಣ್ಣ, ದೀಪಕ್ ದೇವಯ್ಯ ಮತ್ತು ಮಧು ಮಂದಣ್ಣ ಅವರ ಮಾಲೀಕತ್ವದ ‘ಗೌರ್ಸ್’, ಬೆಂಗಳೂರಿನ ಅರೆಯಡ ಪವಿನ್ ಪೊನ್ನಣ್ಣ ಮಾಲೀಕತ್ವದ ‘ಪವನ್ ಪೊನ್ನಣ್ಣ ಫೌಂಡೇಶನ್(ಪಿ.ಪಿ.ಎಫ್)’, ಮತ್ತು ಕಡಮಕೊಲ್ಲಿಯ ಕಾಳಿಮಾಡ ಶರತ್ ಅವರ ಮಾಲೀಕತ್ವದ ‘ಜಿಯಾನ ಗ್ರೂಪ್’ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ ಎಂದು ಅವರು ವಿವರಣೆ ನೀಡಿದರು.

ಡಿ. 10ರಂದು ಸಂಜೆ 4 ಗಂಟೆಗೆ ಗೋಣಿಕೊಪ್ಪಲಿನ ಪಾಪೇರ ಸಭಾಂಗಣದಲ್ಲಿ ಐದು ತಂಡಗಳ ಮಾಲೀಕರ ಸಮ್ಮುಖದಲ್ಲಿ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ. ಪಂದ್ಯಾವಳಿಯಲ್ಲಿ ವಿಜೇತರಾಗುವ ತಂಡಗಳಿಗೆ ನಗದು ಬಹುಮಾನ ಮತ್ತು ಆಕರ್ಷಕ ಪಾರಿತೋಷಕವನ್ನು ನೀಡಿ ಗೌರವಿಸಲಾಗುವುದು. ವಿಜೇತ ತಂಡಗಳಿಗೆ ನೀಡುವ ಟ್ರೋಫಿಯನ್ನು ಜಸ್ಟ್ ಕೊಡವ ಮೊಬೈಲ್ ಆಪ್ ಮತ್ತು ಬೆಂಗಳೂರು ರಿಯಲ್ ಎಸ್ಟೇಟ್ ಸಂಸ್ಥೆಯ ಕುಟ್ಟಡ ಸುದೀನ್ ಮಂದಣ್ಣ ಅವರು ಪ್ರಾಯೋಜಿಸಿದ್ದಾರೆ ಎಂದು ನಾಚಪ್ಪ ಅವರು ಇದೇ ವೇಳೆ ತಿಳಿಸಿದರು.

ಗೋಷ್ಠಿಯಲ್ಲಿ ಪಂದ್ಯಾವಳಿ ಆಯೋಜನಾ ಸಮಿತಿಯ ಉಪಾಧ್ಯಕ್ಷರಾದ ಕುಪ್ಪಂಡ ದಿಲನ್ ಮತ್ತು ಸಣ್ಣುವಂಡ ಲೋಕೇಶ್ ಉಪಸ್ಥಿತರಿದ್ದರು.

error: Content is protected !!