ಮಡಿಕೇರಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಣೆ

09/12/2020

ಮಡಿಕೇರಿ ಡಿ. 9 : ಬೀದಿಬದಿ ವ್ಯಾಪಾರಿಗಳ ಒಕ್ಕೂಟ ಕೊಡಗು ಜಿಲ್ಲಾ ಘಟಕದಿಂದ ರಾಜಾಸೀಟ್‍ನ ಬಳಿಯ ವ್ಯಾಪಾರಿಗಳಿಗೆ ಮಾಸ್ಕ್ ಮತ್ತು ಸೋಪ್ ವಿತರಿಸಲಾಯಿತು.
ಮಾಸ್ಕ್ ವಿತರಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ರಾಮ್‍ದಾಸ್, ಬೀದಿಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿ ಆತ್ಮನಿರ್ಭರ ಯೋಜನೆಯಡಿ 10 ಸಾವಿರ ಸಹಾಯಧನ ನೀಡಲಾಗುತ್ತಿದ್ದು, ನಗರವ್ಯಾಪ್ತಿಯಲ್ಲಿ 429 ಮಂದಿ ವ್ಯಾಪಾರಿಗಳನ್ನು ದಾಖಲಿಸಿಕೊಳ್ಳಲಾಗಿದೆ. ಇಲ್ಲಿಯ ವರೆಗೆ 123 ಮಂದಿಗೆ ಲೋನ್ ನೀಡಲಾಗಿದ್ದು, ಬೀದಿಬದಿ ವ್ಯಾಪಾರಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ನಡೆಸುವಂತೆ ಕರೆ ನೀಡಿದರು.
ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನ ಕೋವಿಡ್ ನಿಯಮಗಳನು ಮರೆತು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಜನರಲ್ಲಿ ಮತ್ತೆ ಜಾಗೃತಿ ಮೂಡಿಸಲು ಸಾಧ್ಯ ಎಂದರು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಆರ್ ಜಗದೀಶ್, ನಗರಾಧ್ಯಕ್ಷ ಐಯುಬ್ ಮತ್ತಿತರರು ಇದ್ದರು.