ಗುಡಿಸಲಿಗೆ ನುಗ್ಗಿದ ಕಾಡಾನೆ : ವೃದ್ಧೆ ಪ್ರಾಣಾಪಾಯದಿಂದ ಪಾರು : ಬಸವನಹಳ್ಳಿಯಲ್ಲಿ ಘಟನೆ

09/12/2020

ಮಡಿಕೇರಿ ಡಿ.9 : ಕಾಡಾನೆಯೊಂದು ಗುಡಿಸಲನ್ನು ಧ್ವಂಸಗೊಳಿಸಿ, ಗುಡಿಸಲಿನಲ್ಲಿದ್ದ ಕಪಾಟನ್ನು ಬೀಳಿಸಿದ ಪರಿಣಾಮ ವಯೋವೃದ್ಧೆಯೊಬ್ಬರು ಗಾಯಗೊಂಡಿರುವ ಘಟನೆ ಮಾಲ್ದಾರೆಯ ಬಸವನಹಳ್ಳಿ ಗಿರಿಜನರ ಹಾಡಿಯಲ್ಲಿ ನಡೆದಿದೆ.
ಜೇನು ಕುರುಬರ ರಂಗಿ(60) ಎಂಬಾಕೆಯೇ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಮಹಿಳೆ. ಸಣ್ಣ ಪುಟ್ಟ ಗಾಯಗೊಂಡ ರಂಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಅರಣ್ಯದ ಅಂಚಿನಲ್ಲಿ ವಾಸಮಾಡುವ ಕಾರ್ಮಿಕರು, ಅದರಲ್ಲೂ ವಿಶೇಷವಾಗಿ ಜೇನು ಕುರುಬ ಜನಾಂಗದವರು ಕಾಡಾನೆ, ವನ್ಯ ಜೀವಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರು. ಯಾವುದೇ ಕಾಡಾನೆಗಳು ಬಂದರೂ ಅದನ್ನು ಬೆದರಿಸಿ, ಬೊಬ್ಬೆಹಾಕಿ ಓಡಿಸುವ ಕಲೆ ಉಳ್ಳವರು. ಆದರೆ ಇದೀಗ ಬಸವನಹಳ್ಳಿ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಿನಿಂದ ಕಾಡಾನೆ ಹಾಗೂ ಮರಿಯಾನೆ ಸೇರಿಕೊಂಡು ಈ ಭಾಗದಲ್ಲಿ ವಾಸಿಸುವ ಜನರ ನಿದ್ದೆಗೆಡಿಸಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಇದೇ ಆನೆ ಸಮೀಪದ ಅಂಗನವಾಡಿಯ ಬಾಗಿಲು ಮುರಿದು ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ, ಬೆಲ್ಲ, ತೆಂಗಿನಕಾಯಿ ಇತ್ಯಾದಿ ವಸ್ತುಗಳನ್ನು ತಿಂದು ತೆರಳಿತ್ತು. ಈ ಆನೆಯು ಆಹಾರದ ರುಚಿ ಕಂಡುಕೊಂಡಿರುವದರಿಂದ ನವೆಂಬರ್ ತಿಂಗಳಲ್ಲಿ ಬಸವನಹಳ್ಳಿ ಜಂಕ್ಷನ್ ಬಳಿ ಇರುವ ಜೇನುಕುರುಬರ ಮಡಿಕೆ ಭೋಜ ಎಂಬಾತನ ಮನೆಗೆ ನುಗ್ಗಿ, ಮನೆಯನ್ನು ಹಾನಿಗೊಳಿಸಿ ಮನೆಯಲ್ಲಿದ್ದ ಬೆಲ್ಲಕ್ಕಾಗಿ ಹುಡುಕಾಟ ನಡೆಸಿತ್ತು. ಆದರೆ ಮನೆಯಲ್ಲಿ ಏನೂ ಸಿಗದ ಕಾರಣ ಮನೆಯ ಗೋಡೆ, ಬಾಗಿಲು ಬೀಳಿಸಿ ತೆರಳಿತ್ತು. ಇದೀಗ ಇದೇ ಕಾಡಾನೆ ಹಾಗೂ ಮರಿಯಾನೆ ರಂಗಿ ಮನೆಗೆ ನುಗ್ಗಿ ಆಹಾರಕ್ಕಾಗಿ ಹುಡುಕಾಟ ನಡೆಸಿದೆ. ಇದರಿಂದಾಗಿ ಈ ಭಾಗದಲ್ಲಿ ವಾಸಿಸುವ ಬಹುತೇಕ ಜೇನುಕುರುಬ ಜನಾಂಗದವರಿಗೆ ದಿಕ್ಕು ತೋಚದಂತಾಗಿದೆ.
ತಲ ತಲಾಂತರದಿಂದಲೂ ಕಾಡಾನೆಗಳು ಮನೆಗೆ ಹಾನಿಮಾಡುವುದು, ಮನೆಯ ಬಾಗಿಲನ್ನು ಮುರಿದ ಉದಾಹರಣೆಗಳಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಆಹಾರಕ್ಕಾಗಿ ಮನೆಯನ್ನೂ ಧ್ವಂಸಗೊಳಿಸುತ್ತಿರುವುದು ಆತಂಕ ಸೃಷ್ಟಿಸಿದೆ ಎನ್ನುತ್ತಾರೆ ಅರಣ್ಯ ವಾಸಿ ಶಂಕರ.
ನಾಲ್ಕು ತಿಂಗಳಲ್ಲಿ 5 ಮನೆಗಳಿಗೆ ಹಾನಿ:ಕಳೆದ ನಾಲ್ಕು ತಿಂಗಳಿನಿಂದ ಆರು ಮನೆಗಳ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಐದು ಮನೆಗಳು ಹಾನಿಗೊಂಡಿವೆ. ಆನೆ ದಾಳಿಯಿಂದ ಮನೆಯಲ್ಲಿದ್ದ ಅಗತ್ಯ ವಸ್ತುಗಳು ಹಾನಿಯಾಗುವುದರೊಂದಿಗೆ ಒಂದು ಮನೆ ಕುಸಿತಗೊಂಡಿದೆ. ಇತ್ತೀಚೆಗೆ ಹಾಡಹಗಲೇ ಕಾಡಾನೆಯೊಂದು ಹಾಡಿಯ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಿರಂತರವಾಗಿ ಕಾಡುತ್ತಿರುವ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಹಾಡಿಯ ನಿವಾಸಿ ಗಣೇಶ್ ಒತ್ತಾಯಿಸಿದ್ದಾರೆ.