ಸೋಮವಾರಪೇಟೆ ಪ.ಪಂ ಸಾಮಾನ್ಯ ಸಭೆ : ಪಟ್ಟಣದ ಅಭಿವೃದ್ಧಿ ಕಾರ್ಯಕ್ಕೆ ಅಧಿಕಾರಿಗಳ ಸಹಕಾರ ಅಗತ್ಯ : ಅಧ್ಯಕ್ಷೆ ನಳಿನಿ ಗಣೇಶ್

09/12/2020

ಸೋಮವಾರಪೇಟೆ,ಡಿ.9: ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಪರಸ್ಪರ ಸಹಕಾರ ಹಾಗೂ ಸಮನ್ವಯತೆಯಿಂದ ಪಟ್ಟಣದ ಅಭಿವೃದ್ಧಿ ಸಾಧ್ಯವೆಂದು ಅಧ್ಯಕ್ಷೆ ನಳಿನಿ ಗಣೇಶ್ ಆಶಯ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಳೀಯ ಆಡಳಿತ ವ್ಯವಸ್ಥೆ ಸಮರ್ಪಕವಾಗಿ ನಡೆಯಬೇಕಾದರೆ ಇತರೆ ಇಲಾಖೆಯ ಸಹಕಾರವೂ ಬೇಕು. ಆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಲೋಕೋಪಯೋಗಿ, ವಿದ್ಯುತ್, ಪೊಲೀಸ್, ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಲಾಗುತ್ತಿದೆ ಎಂದರು.
ಸದಸ್ಯ ಎಸ್.ಆರ್. ಸೋಮೇಶ್ ಮಾತನಾಡಿ, ಪಟ್ಟಣದ ಮಡಿಕೇರಿ ರಸ್ತೆ, ಎಂ.ಜಿ.ರಸ್ತೆ, ಹಾಗೂ ಶಾಲಾ ರಸ್ತೆ, ಬಸವೇಶ್ವರ ರಸ್ತೆ ಮತ್ತು ಬಾಣಾವರ ರಸ್ತೆಗಳು ಹೆದ್ದಾರಿಗಳಾಗಿ ವಿಸ್ತರಣೆ ಆಗುತ್ತದೆ ಎಂಬ ಹಿನ್ನೆಲೆಯಲ್ಲಿ ಅಲ್ಲಿನ ಜನರು ಆತಂಕದಲ್ಲಿದ್ದಾರೆ. ಈ ಯೋಜನೆ ಯಾವಾಗ ಆಗುವುದು ಎಂದು ಪ್ರಶ್ನಿಸಿದರು. ವೀರಾಜಪೇಟೆ, ಬೈಂದೂರು, ರಾಜ್ಯ ಹೆದ್ದಾರಿ ಈಗಾಗಲೇ ಪಟ್ಟಣದೊಳಗೆ ಹಾದುಹೋಗಿದೆ. ಸಾಧ್ಯವಾದಷ್ಟು ಬೇಗ ಕಾಮಗಾರಿ ನಡೆಯಲಿದೆ ಎಂದು ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‍ಕುಮಾರ್ ತಿಳಿಸಿದರು.
ರಾಜ್ಯ ಹೆದ್ದಾರಿಯ ಮಾನದಂಡಗಳೇನು? ಎಷ್ಟು ಅಡಿ ಅಗಲ ರಸ್ತೆ ವಿಸ್ತೀರ್ಣವಾಗುತ್ತದೆ. ಪಟ್ಟಣದೊಳಗೆ ವಿನಾಯಿತಿ ಇದೆಯೇ ಎಂದು ಉಪಾಧ್ಯಕ್ಷ ಸಂಜೀವ ಪ್ರಶ್ನಿಸಿದರು. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಿಗೆ ಮಧ್ಯ ರಸ್ತೆಯಿಂದ 40 ಮೀಟರ್ ವಿಸ್ತೀರ್ಣ ನಿಗದಿಪಡಿಸಲಾಗಿದೆ. ಆದರೆ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಚರಂಡಿಯ ಅಂಚಿನಿಂದ 6 ಮೀಟರ್ ಬಿಟ್ಟು ಕಟ್ಟಡಗಳನ್ನು ಕಟ್ಟಬೇಕೆಂದು ಅಭಿಯಂತರರು ತಿಳಿಸಿದರು. ಹೀಗಾದರೆ ಪಟ್ಟಣದ ಜನತೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಸದಸ್ಯ ವೆಂಕಟೇಶ್ ಆತಂಕ ವ್ಯಕ್ತಪಡಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಗಳ ನಿರ್ಮಾಣ ನಿರ್ವಹಣೆ ಲೋಕೋಪಯೋಗಿ ಇಲಾಖೆ ಮಾಡುತ್ತಿದೆ. ಆದರೆ ಚರಂಡಿಯನ್ನು ಏಕೆ ಮಾಡುತ್ತಿಲ್ಲ ಎಂದು ಸದಸ್ಯೆ ಶೀಲಾ ಡಿಸೋಜ ಪ್ರಶ್ನಿಸಿದರು. ರಸ್ತೆಯೊಂದಿಗೆ ಚರಂಡಿಯನ್ನು ಸಹ ಇಲಾಖೆಯೇ ನಿರ್ವಹಿಸಬೇಕಿದೆ. ಆದರೆ ಇಲ್ಲಿ ಪಂಚಾಯಿತಿಯೇ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ಕ್ರಿಯಾ ಯೋಜನೆ ರೂಪಿಸಿ ಚರಂಡಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.
ರಾಜ್ಯ ಹೆದ್ದಾರಿ ಹಾದು ಹೋಗುವ ಬಾಣಾವರ ರಸ್ತೆಯಲ್ಲಿ ಮಣ್ಣು ಕುಸಿಯುತ್ತಿದ್ದು, ಅಲ್ಲಿ ತಡೆಗೋಡೆ ನಿರ್ಮಿಸಬೇಕೆಂದು ಪಿ.ಕೆ. ಚಂದ್ರು ತಿಳಿಸಿದರು. ತೊಟಗಾರಿಕಾ ಇಲಾಖೆ ಸಮೀಪ ರಸ್ತೆಗೆ ಗುಡ್ಡ ಕುಸಿದು ಬಿದ್ದಿದೆ. ಅದನ್ನು ತೆರವುಗೊಳಿಸಿ ತಡೆಗೋಡೆ ನಿರ್ಮಿಸಬೇಕೆಂದು ಬಿ.ಆರ್. ಮಹೇಶ್ ತಿಳಿಸಿದರು. ಈ ಸ್ಥಳಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಇಂಜಿನಿಯರ್ ಹೇಳಿದರು.
ಲೋಕೋಪಯೋಗಿ ಇಲಾಖೆಗೆ ಸೇರಿದ ರಾಜ್ಯ ಹೆದ್ದಾರಿಗಳ ಸಮೀಪ ಹೊಸ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭ ತಮ್ಮ ಇಲಾಖೆ ನೀಡುವ ನಿರಾಕ್ಷೇಪಣಾ ಪತ್ರದ ಒಂದು ಪ್ರತಿಯನ್ನು ಪಟ್ಟಣ ಪಂಚಾಯಿತಿಗೂ ಕಳುಹಿಸಬೇಕೆಂದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು.
ಪಟ್ಟಣದಲ್ಲಿ ಬಹುತೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿವೆ. ಈ ಬಗ್ಗೆ ಸಾಕಷ್ಟು ಬಾರಿ ಇಲಾಖೆಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಸದಸ್ಯರ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಸದಸ್ಯರಾದ ಶುಭಾಕರ್, ಜೀವನ್ ಹಾಗೂ ಮಹೇಶ್ ಅವರುಗಳು ಸೆಸ್ಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರ ಸಂತೋಷ್, ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಹಿಂದೆ 25 ಮಂದಿ ಇದ್ದ ಸಿಬ್ಬಂದಿ ಈಗ ಕೇವಲ 10 ಮಂದಿ ಮಾತ್ರ ಇದ್ದಾರೆ. ಆದ್ದರಿಂದ ಎಲ್ಲಾ ಕಡೆ ಕಾರ್ಯನಿರ್ವಹಿಸಲು ಕಷ್ಟವಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇತ್ತೀಚೆಗೆ ಪಟ್ಟಣದಲ್ಲಿ ಹೊಸ ಕಂಬಗಳನ್ನು ಅಳವಡಿಸುವ ಸಂದರ್ಭ ಪಂಚಾಯಿತಿಯ ಆಸ್ತಿಯನ್ನು ಹಾನಿಗೊಳಿಸಲಾಗಿದೆ. ಚರಂಡಿಗಳನ್ನು ಒಡೆದುಹಾಕಲಾಗಿದೆ. ಈ ಬಗ್ಗೆ ಸೆಸ್ಕ್ ಇಲಾಖೆ ಕ್ರಮಕೈಗೊಳ್ಳಬೇಕು. ಆಗಿರುವ ನಷ್ಟವನ್ನು ಭರಿಸಬೇಕೆಂದು ಅಧ್ಯಕ್ಷೆ ನಳಿನಿ ಗಣೇಶ್, ಉಪಾಧ್ಯಕ್ಷ ಸಂಜೀವ ಆಗ್ರಹಿಸಿದರು.
ಈ ಬಗ್ಗೆ ಇಲಾಖೆಗೆ ನೋಟೀಸ್ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ಹೇಳಿದರು. ಈ ಸಂದರ್ಭ ಪಟ್ಟಣದಲ್ಲಿ ಅನಧಿಕೃತ ದಾರಿದೀಪಗಳಿರುವದೂ ಕೂಡ ನಮ್ಮ ಗಮನಕ್ಕೆ ಬಂದಿದೆ ಎಂದು ಅಭಿಯಂತರ ಸಂತೋಷ್ ಹೇಳಿದ್ದು, ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಯಿತು.
ಇಲ್ಲಿ ಅನಧಿಕೃತ ಪ್ರಶ್ನೆಯೇ ಇಲ್ಲ. ವಿದ್ಯುತ್ ಬಿಲ್ ಸರ್ಕಾರ ಕಟ್ಟುವುದು. ಯಾರೂ ಕೈಯಿಂದ ಕಟ್ಟುವುದಿಲ್ಲ. ನಾವು ಪಂಚಾಯಿತಿ ಆಸ್ತಿ ನಷ್ಟದ ಬಗ್ಗೆ ಪ್ರಶ್ನಿಸಿದ್ದಕ್ಕೆ ಈ ರೀತಿ ಹೇಳುವುದು ಸರಿಯಲ್ಲ. ನಿಮ್ಮ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರನಿಂದ ನಷ್ಟ ಭರಿಸಿ. ಈ ಬಗ್ಗೆ ಯಾವುದೇ ರಾಜಿ ಇಲ್ಲ ಎಂದು ಸದಸ್ಯರಾದ ಶೀಲಾ ಡಿಸೋಜ, ಪಿ.ಕೆ. ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವದು. ಇದರೊಂದಿಗೆ ಪಟ್ಟಣದಲ್ಲಿರುವ ಶಿಥಿಲಾವಸ್ಥೆಯ ವಿದ್ಯುತ್ ಕಂಬಗಳ ಬದಲಾವಣೆಗೆ ಕ್ರಮಕೈಗೊಳ್ಳುವದಾಗಿ ತಿಳಿಸಿದರು.
ಪಟ್ಟಣದಲ್ಲಿ ವಾಹನ ಸಂಖ್ಯೆ ಹೆಚ್ಚುತ್ತಿದ್ದು, ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಸಮರ್ಪಕ ಸಂಚಾರ ವ್ಯವಸ್ಥೆ ಹಾಗೂ ನಿಲುಗಡೆಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸೋಮೇಶ್ ತಿಳಿಸಿದರು.
ಸೋಮವಾರ ಸಂತೆಯ ದಿನ ವ್ಯಾಪಾರಕ್ಕಾಗಿ ಬರುವ ವರ್ತಕರ ವಾಹನಗಳನ್ನು ಆರ್‍ಎಂಸಿ ಬಳಿ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಶರತ್ ಹೇಳಿದರು.
ವಾಹನ ನಿಲುಗಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಒಂದೆಡೆ ಪಾರ್ಕಿಂಗ್‍ಗೆ ಆದ್ಯತೆ ನೀಡಬೇಕು. ಪಟ್ಟಣದ ಪಾರ್ಕ್, ಕ್ರೀಡಾಂಗಣಗಳು, ಶತಮಾನೋತ್ಸವ ಭವನ ಮುಂತಾದ ಸ್ಥಳಗಳು ಮದ್ಯಪಾನ, ಗಾಂಜಾ ಸೇವನೆ ಹಾಗೂ ಅನೈತಿಕತೆಯ ತಾಣವಾಗಿವೆ. ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಸದಸ್ಯೆ ಶೀಲಾ ಡಿಸೋಜ ತಿಳಿಸಿದರು. ಪಟ್ಟಣದ 11 ವಾರ್ಡ್‍ಗಳಲ್ಲಿ ಬೀಟ್ ವ್ಯವಸ್ಥೆಯಾಗಬೇಕೆಂದು ನಳಿನಿ ಗಣೇಶ್ ಹೇಳಿದರು. ಪಟ್ಟಣದ ತ್ಯಾಗರಾಜ ರಸ್ತೆಯಲ್ಲಿರುವ ಪ್ಲಾಂಟೇಷನ್ ಸಪ್ಲೈ ಏಜೆನ್ಸಿಯವರು, ಮಂಗಳ ಏಜೆನ್ಸಿಯವರು ತಮಗೆ ಬರುವ ಸಾಮಾಗ್ರಿಗಳ ಬೃಹತ್ ವಾಹನಗಳನ್ನು ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ನಿಲ್ಲಿಸಿಕೊಳ್ಳುವುದರಿಂದ ಇತರ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಅವರು ಬೆಳಿಗ್ಗೆ ಅಥವಾ ರಾತ್ರಿ ವೇಳೆಯಲ್ಲಿ ಸಾಮಾಗ್ರಿಗಳನ್ನು ಇಳಿಸಿಕೊಳ್ಳಬೇಕು ಎಂದು ಪಿ.ಕೆ. ಚಂದ್ರು ಹಾಗೂ ಮಹೇಶ್ ಸಭೆಯಲ್ಲಿ ಗಮನಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸಬ್ ಇನ್ಸ್‍ಪೆಕ್ಟರ್ ಶ್ರೀಧರ್, ಸೋಮವಾರ ಸಂತೆ ವರ್ತಕರ ವಾಹನ ಬೇರೆ ಕಡೆ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಅಲ್ಲದೇ ಸುಗಮ ಸಂಚಾರ ವ್ಯವಸ್ಥೆ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಬೋರ್ಡ್ ಅಳವಡಿಕೆ, ರಸ್ತೆಗಳ ಬದಿ ಪಾರ್ಕಿಂಗ್‍ಗೆ ಪೇಯಿಂಟ್ ಮಾಡಬೇಕಾಗಿದೆ ಎಂದು ಸಭೆಯ ಗಮನ ಸೆಳೆದರು.
ಪಟ್ಟಣದಲ್ಲಿ ಈಗಾಗಲೇ ಸೋಮವಾರ ಕೆಲವು ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿದೆ. ಅವುಗಳು ಕಟ್ಟುನಿಟ್ಟಾಗಿ ಜಾರಿಗೆ ತರಲು ಪಟ್ಟಣ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ನೋಟಿಫಿಕೇಷನ್ ಆಗಬೇಕಾಗಿದೆ ಎಂದರು.
ಪಟ್ಟಣ ಪಂಚಾಯಿತಿಯಲ್ಲಿ ಸರ್ವೆಯರ್ ಇಲ್ಲದೇ ಇರುವುದರಿಂದ ಪಟ್ಟಣ ಹಾಗೂ ಖಾಸಗಿ ಆಸ್ತಿಗಳ ಮತ್ತು ಕಟ್ಟಡ ನಿರ್ಮಾಣ ಸಂದರ್ಭ ಸರ್ವೆಗೆ ತೊಡಕಾಗುತ್ತಿದೆ. ಆದ್ದರಿಂದ ಪಂಚಾಯಿತಿಗೆ ಒಬ್ಬ ಸರ್ವೆಯರ್ ನೇಮಿಸಬೇಕೆಂದು ಅಧ್ಯಕ್ಷೆ ನಳಿನಿ, ಉಪಾಧ್ಯಕ್ಷ ಸಂಜೀವ ಅವರುಗಳು, ಸರ್ವೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಭೂಮಾಪನ ಇಲಾಖೆಯ ಪರ್ಯಾವೇಕ್ಷಕ ಬ್ರಹ್ಮೇಶ್, ಇಲಾಖೆಯಲ್ಲಿ ಪ್ರಸ್ತುತ ಈರ್ವರು ಮಾತ್ರ ಭೂಮಾಪಕರಿದ್ದು ತೊಂದರೆಯಾಗುತ್ತಿದೆ. ಆದರೆ ನೋಂದಾಯಿತ ಹಾಗೂ ಪರವಾನಗಿ ಪಡೆದ ಸರ್ವೆಯರ್ ಮೂಲಕ ಕೆಲಸ ಮಾಡಿಸಿಕೊಳ್ಳಬಹುದಾಗಿದೆ ಎಂದರು. ಸರ್ವೆಯರ್ ಇಲ್ಲದೇ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಸ್ತಿ ಪಾಸ್ತಿಗಳು ಹಾಗೂ ಪೈಸಾರಿ ಜಾಗಗಳನ್ನು ಗುರುತಿಸಲು ಕಷ್ಟವಾಗುತ್ತಿದೆ. ಆದ್ದರಿಂದ ತುರ್ತು ಕ್ರಮ ಕೈಗೊಳ್ಳಬೇಕೆಂದು ಸದಸ್ಯೆ ಶೀಲಾ ತಿಳಿಸಿದರು.
ಖಾಸಗಿಯಾಗಿ ಸರ್ವೆ ನಡೆಸಿ ಕೊಡುವವರಿಗೆ ಅವರ ಮೊತ್ತವನ್ನು ಪಂಚಾಯಿತಿಯಿಂದ ಭರಿಸಲಾಗುವದು ಎಂದು ಅಭಿಯಂತರ ಹೇಮಂತ್‍ಕುಮಾರ್ ಹೇಳಿದರು. ಸಭೆಯಲ್ಲಿ ವಿಷಯ ಸಂಗ್ರಹಕಿ ರೂಪಾ ಮಹೇಂದ್ರ, ಲೆಕ್ಕಾಧಿಕಾರಿ ಭಾವನ ಉಪಸ್ಥಿತರಿದ್ದರು.