ಜಾನುವಾರು ಕಳ್ಳತನ ಆರೋಪ : ಐವರನ್ನು ಬಂಧಿಸಿದ ಮಡಿಕೇರಿ ಪೊಲೀಸರು

10/12/2020

ಮಡಿಕೇರಿ ಡಿ.10 : ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಜಾನುವಾರನ್ನು ಕಳ್ಳತನ ಮಾಡಿದ ಆರೋಪದಡಿ ಮಡಿಕೇರಿ ಗ್ರಾಮಾಂತರ ಪೊಲೀಸರು ಐವರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಪಿಕ್‍ಅಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಬೆಟ್ಟಗೇರಿ ನಿವಾಸಿ ಅಯ್ಯಪ್ಪ ಎಂಬವರ ಕೊಟ್ಟಿಗೆಯಿಂದ ಡಿ.1ರಂದು ಜಾನುವಾರು ಕಾಣೆಯಾಗಿತ್ತು. ಎಲ್ಲಾ ಕಡೆ ಹುಡುಕಿದರೂ 35 ಸಾವಿರ ರೂ. ಬೆಲೆ ಬಾಳುವ ಜಾನುವಾರು ಪತ್ತೆಯಾಗಿರಲಿಲ್ಲ. ಡಿ.3ರಂದು ಅಯ್ಯಪ್ಪ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಮ್ಮ ಜಾನುವಾರು ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಪ್ರಕರಣವನ್ನು ತನಿಖೆ ನಡೆಸಿದ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಸಂದರ್ಭ ಜಾನುವಾರು ಕಳ್ಳತನ ಮಾಡಿದ ಪ್ರಕರಣವನ್ನು ಆರೋಪಿಗಳು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟ್ಟಗೇರಿ ನಿವಾಸಿ ರುದ್ರಪ್ಪ(56), ಕೊಂಡಂಗೇರಿಯ ನಿವಾಸಿಗಳಾದ ಅಬ್ದುಲ್ ರೆಹಮಾನ್(24), ಶಿಯಾಬ್(25), ಇಸ್ಮಾಯಿಲ್(26) ಮತ್ತು ಅಬೀದ್(27) ಎಂಬವವರು ಬಂಧಿತರು.
ಆರೋಪಿಗಳಿಂದ ಜಾನುವಾರು ಸಾಗಾಟಕ್ಕೆ ಬಳಸಿದ್ದ ಒಂದು ಪಿಕ್‍ಅಪ್ ವಾಹನ(ಕೆ.ಎ.12-ಬಿ.0864) ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್ ಅವರ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಚಂದ್ರಶೇಖರ್, ಸದಾಶಿವ, ಸಿಬ್ಬಂದಿಗಳಾದ ರವಿ ಮತ್ತಿತ್ತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.