ಪರಿಷತ್‍ನಲ್ಲಿ ಮಡಿಕೇರಿ ನಗರಸಭೆ ವ್ಯಾಪ್ತಿಯ ಯುಜಿಡಿ ಕಾಮಗಾರಿ ಬಗ್ಗೆ ಪ್ರಶ್ನಿಸಿದ ಎಂಎಲ್‍ಸಿ ವೀಣಾ ಅಚ್ಚಯ್ಯ

10/12/2020

ಮಡಿಕೇರಿ ಡಿ. 10 : ಜಿಲ್ಲೆಯ ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆಯೇ? ಈ ಕಾಮಗಾರಿಯು ಇದುವರೆಗೂ ಪೂರ್ಣಗೊಳ್ಳದಿರಲು ಕಾರಣಗಳೇನು ಎಂದು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ನಗರಾಭಿವೃದ್ದಿ ಸಚಿವರಾದ ಬಿ.ಎ.ಬಸವರಾಜ ಅವರಿಂದ ಮಾಹಿತಿ ಪಡೆದರು.
ಇದಕ್ಕೆ ಉತ್ತರಿಸಿದ ನಗರಾಭಿವೃದ್ದಿ ಸಚಿವರು ಮಾಹಿತಿ ನೀಡಿ, ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಯುಜಿಡಿ ಕಲ್ಪಿಸುವ ರೂ.4,956 ಲಕ್ಷಗಳ ಯೋಜನೆಗೆ ಸರ್ಕಾರದ ಆದೇಶದಂತೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಯೋಜನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಜನವರಿ, 2016 ರಿಂದ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಕೊಡಗು ಜಿಲ್ಲೆಯ ಮಡಿಕೇರಿ ನಗರ ಸಭೆಯ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿಯು ಪೂರ್ಣಗೊಳ್ಳದಿರಲು ಕಾರಣಗಳು ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 15 ಕಿ.ಮೀ. ಉದ್ದಕ್ಕೆ ಕಾಂಕ್ರಿಟ್ ಮತ್ತು ಡಾಂಬರು ರಸ್ತೆಗಳನ್ನು ಕತ್ತರಿಸಿ ಕೊಳವೆ ಸಾಲುಗಳನ್ನು ಅಳವಡಿಸಲು ಸಾರ್ವಜನಿಕರಿಂದ ಅಡಚಣೆಯಿರುತ್ತದೆ.
ರಾಜಶೇಖರ್ ಹೋಮ್ ನೀಡ್ಸ್ ಬಳಿ 01 ವೆಟ್‍ವೆಲ್ ಮತ್ತು 9 ಸಪ್ಟಿಕ್ ಟ್ಯಾಂಕ್ ನಿರ್ಮಾಣ ಮಾಡಲು ನಗರಸಭೆ ವತಿಯಿಂದ ಜಮೀನನ್ನು ಹಸ್ತಾಂತರಿಸಲು ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ನಗರದ ಮೈತ್ರಿ ಹಾಲ್‍ನಿಂದ ಗಾಲ್ಫ್ ಮೈದಾನದ ಬಳಿ ಉದ್ದೇಶಿತ ಮಲಿನ ನೀರು ಶುದ್ಧೀಕರಣ ಘಟಕದವರೆಗೆ ಮುಖ್ಯ ಕಾಲುವೆಯ ಪಕ್ಕದಲ್ಲಿ ಒಳಚರಂಡಿ ಕೊಳವೆ ಸಾಲುಗಳನ್ನು ಅಳವಡಿಸಲು ನಗರಸಭೆ ವತಿಯಿಂದ ಜಾಗ ಹಸ್ತಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಲಿನ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲು ಅವಶ್ಯವಿರುವ ಸಂಪರ್ಕ ರಸ್ತೆಯ ಜಾಗವು ಅತಿಕ್ರಮಣಗೊಂಡಿದ್ದು, ತೆರವುಗೊಳಿಸುವ ಕೆಲಸವು ಪ್ರಗತಿಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ಕಾಮಗಾರಿಗೆ ಕಳೆದ ಮೂರು ವರ್ಷಗಳಿಂದ ಬಿಡುಗಡೆಯಾಗಿರುವ ಅನುದಾನವೆಷ್ಟು; ಖರ್ಚಾಗಿರುವ ಅನುದಾನವೆಷ್ಟು, ಯಾವ ಕಾಲಮಿತಿಯೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ವೀಣಾ ಅಚ್ಚಯ್ಯ ಅವರು ನಗರಾಭಿವೃದ್ದಿ ಸಚಿವರಾದ ಬಿ.ಎ.ಬಸವರಾಜ ಅವರನ್ನು ಪ್ರಶ್ನಿಸಿದರು.
ಇದಕ್ಕೆ ನಗರಾಭಿವೃದ್ಧಿ ಸಚಿವರು ಈ ಕಾಮಗಾರಿಗೆ ಕಳೆದ ಮೂರು ವರ್ಷಗಳಿಂದ ಬಿಡುಗಡೆಯಾಗಿರುವ ಅನುದಾನ ರೂ.2842.79 ಲಕ್ಷಗಳು. ಈ ಯೋಜನೆಗೆ ನವೆಂಬರ್ 2020ರ ಅಂತ್ಯಕ್ಕೆ ರೂ.2734.84 ಲಕ್ಷಗಳು ವೆಚ್ಚವಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 15 ಕಿ.ಮೀ. ಉದ್ದಕ್ಕೆ ಕಾಂಕ್ರಿಟ್ ಮತ್ತು ಡಾಂಬರು ರಸ್ತೆಗಳನ್ನು ಕತ್ತರಿಸಿ ಕೊಳವೆ ಸಾಲುಗಳನ್ನು ಅಳವಡಿಸಲು ಸಾರ್ವಜನಿಕರಿಂದ ಅಡಚಣೆ ನಿವಾರಣೆ, 1 ವೆಟ್‍ವೆಲ್ ನಿರ್ಮಾಣಕ್ಕೆ ಅವಶ್ಯಕವಿರುವ ಜಮೀನು, ಮೈತ್ರಿ ಹಾಲ್‍ನಿಂದ ಗಾಲ್ಫ್ ಮೈದಾನದ ಬಳಿ ಉದ್ದೇಶಿತ ಮಲಿನ ನೀರು ಶುದ್ದೀಕರಣ ಘಟಕದವರೆಗೆ ಮುಖ್ಯ ಕಾಲುವೆಯ ಪಕ್ಕದಲ್ಲಿ ಒಳಚರಂಡಿ ಕೊಳವೆ ಸಾಲುಗಳನ್ನು ಅಳವಡಿಸಲು ಜಾಗದ ಹಸ್ತಾಂತರ ಹಾಗೂ ಮಲಿನ ನೀರು ಶುದ್ದೀಕರಣ ಘಟಕವನ್ನು ನಿರ್ಮಿಸಲು ಅವಶ್ಯವಿರುವ ಸಂಪರ್ಕ ರಸ್ತೆಯ ಜಾಗದ ಅತಿಕ್ರಮಣ ತೆರವುಗೊಳಿಸಿ ನಗರಸಭೆಯಿಂದ ಮಂಡಳಿಗೆ ಹಸ್ತಾಂತರಿಸಿದ ನಂತರ ಈ ಕಾಮಗಾರಿಗಳನ್ನು ಒಂದು ವರ್ಷದ ಅವಧಿಯೊಳಗೆ ಪೂರ್ಣಗೊಳಿಸಿ ಯೋಜನೆಯನ್ನು ಚಾಲನೆಗೊಳಿಸಲಾಗುವುದು ಎಂದು ನಗರಾಭಿವೃದ್ದಿ ಸಚಿವರಾದ ಬಿ.ಎ.ಬಸವರಾಜ ಅವರು ಮಾಹಿತಿ ನೀಡಿದರು.