ವಿರೋಧಿಸಿದರೂ ಭೂ ವಿಧೇಯಕಕ್ಕೆ ಒಪ್ಪಿಗೆ

December 10, 2020

ಬೆಂಗಳೂರು ಡಿ.10 : ಕಂದಾಯ ಸಚಿವ ಆರ್.ಅಶೋಕ್ ಮಂಡಿಸಿದ ಭೂ ವಿಧೇಯಕಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿತು. ಸಭಾತ್ಯಾಗದ ನಡುವೆಯೇ ಸದನದಲ್ಲಿ ವಿಧೇಯಕಕ್ಕೆ ಒಪ್ಪಿಗೆ ದೊರೆಯಿತು.
ಇದಕ್ಕೂ ಮುನ್ನ ವಿಧೇಯಕಕ್ಕೆ ಕೆಲವು ತಿದ್ದುಪಡಿಗಳನ್ನು ಮಂಡಿಸಿದ ಎಚ್.ಕೆ.ಪಾಟೀಲ್ ಕರ್ನಾಟಕದವರಿಗೆ ಮಾತ್ರ ಜಮೀನು ಖರೀದಿಸಲು ಹಾಗೂ ಅನ್ಯ ರಾಜ್ಯದವರು ಜಮೀನು ಖರೀದಿಸಿದರೆ ಅದನ್ನು ರದ್ದುಪಡಿಸುವ ಅಧಿಕಾರ ನೀಡಿ ಎಂದು ತಿದ್ದುಪಡಿ ಮಂಡಿಸಿದರು. ತಿದ್ದುಪಡಿಗಳೊಂದಿಗೆ ವಿಧೇಯಕ ಪರ್ಯಾಲೋಚನೆ ಮಾಡಬೇಕೆಂದು ಒತ್ತಾಯಿಸಿದರು.
ತಿದ್ದುಪಡಿ ಮಂಡನೆಗೆ ವಿರೋಧ ವ್ಯಕ್ತಪಡಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಒಮ್ಮೆ ವಿಧೇಯಕ ಅಂಗೀಕಾರವಾದ ನಂತರ ತಿದ್ದುಪಡಿಗೆ ಅವಕಾಶವಿಲ್ಲ. ವಿಧಾನಪರಿಷತ್ನಲ್ಲಿ ಆಗಿರುವ ತಿದ್ದುಪಡಿಗೆ ಸೀಮಿತವಾಗಿದೆ. ಎಚ್.ಕೆ ಪಾಟೀಲ್ ಅವರು ತಂದಿರುವ ತಿದ್ದುಪಡಿಗೆ ಅವಕಾಶವಿಲ್ಲ ಎಂದರು.
ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಸಚಿವ ಆರ್.ಅಶೋಕ್ ಇದಕ್ಕೆ ದನಿಗೂಡಿಸಿ ಮಾತನಾಡಿದರು. ಎಚ್.ಕೆ.ಪಾಟೀಲ್ ಅವರ ಬೆಂಬಲಕ್ಕೆ ನಿಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ರಾಜ್ಯದ ರೈತರನ್ನು ನಿರ್ಗತಿಕರನ್ನಾಗಿ ಮಾಡುತ್ತಿದ್ದೀರಿ ಎಂದರು. ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಹೇಳಿದರು.

error: Content is protected !!