ಪ್ರಾಕೃತಿ ವಿಕೋಪ ಕಾಮಗಾರಿಗೆ 22.19 ಕೋಟಿ ರೂ ಬಿಡುಗಡೆ : ಶಾಸಕ ಕೆ.ಜಿ.ಬೋಪಯ್ಯ ಮಾಹಿತಿ

10/12/2020

ಮಡಿಕೇರಿ ಡಿ.10 : ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಾನಿಯಾದ ಮೂಲಭೂತ ಸೌಕರ್ಯ, ದುರಸ್ತಿ/ ಪುನರ್ ನಿರ್ಮಾಣ ಕಾಮಗಾರಿಗಳಿಗೆ ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ 22.19 ಕೋಟಿ ರೂ. ಬಿಡುಗಡೆಯಾಗಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ.
2019ರ ಜುಲೈ, ಆಗಸ್ಟ್ ತಿಂಗಳಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ರಸ್ತೆ, ಸೇತುವೆ, ಶಾಲೆಗಳು, ಅಂಗನವಾಡಿ ಮತ್ತಿತರ ಕಾಮಗಾರಿಗಳಿಗೆ ಜಿಲ್ಲಾಧಿಕಾರಿ ಅವರು ಕಳುಹಿಸಿದ್ದ 536 ಕೋಟಿ ರೂ. ಕ್ರಿಯಾಯೋಜನೆಗೆ ಅನುಮತಿ ನೀಡಿ 100 ಕೋಟಿ ರೂ. ಬಿಡುಗಡೆ ಮಾಡಲು ಆದೇಶ ಮಾಡಲಾಗಿತ್ತು.
ಅದರಂತೆ ಆರ್ಥಿಕ ಇಲಾಖೆಯ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಸುಮಾರು 11 ಇಲಾಖೆಗಳು ಜಿಲ್ಲಾಧಿಕಾರಿ ಅವರಿಗೆ ಕಾಮಗಾರಿ ಪಟ್ಟಿ ಸಲ್ಲಿಸಿ, ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಒಪ್ಪಿಗೆಯನ್ನು ಜಿಲ್ಲಾಧಿಕಾರಿಯವರು ನೀಡಿ, ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿದ್ದಾರೆ. ಆದರೆ ಮಂಜೂರಾದ 100 ಕೋಟಿ ರೂ. ಅನುದಾನ ಇದುವರೆಗೆ ಬಿಡುಗಡೆಯಾಗಿಲ್ಲ. ಆದ್ದರಿಂದ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿರುವ 100 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಕೆ.ಜಿ.ಬೋಪಯ್ಯ ಅವರು ಕೋರಿದ್ದರು. ಈ ಹಿನ್ನೆಲೆ 22.19 ಕೋಟಿ ರೂ.ವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ.
ಜೊತೆಗೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ ರಸ್ತೆ, ಸೇತುವೆ, ತಡೆಗೋಡೆ ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು ಪುನರ್ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ವತಿಯಿಂದ ಪ್ರಾರಂಭಿಸಲಾದ 45 ಕಾಮಗಾರಿಗಳಿಗೆ ಪ್ರಸಕ್ತ ಸಾಲಿನಲ್ಲಿ (2020-21) ಎಸ್‍ಎಫ್‍ಸಿ ವಿಶೇಷ ಅನುದಾನದಿಂದ 1296 ಲಕ್ಷ ರೂ.ವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ.
ಜಿಲ್ಲೆಯ ಒಂದು ನಗರಸಭೆ ಮತ್ತು ಮೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಕಾಮಗಾರಿಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂದು ಶಾಸಕರು ತಿಳಿಸಿದ್ದಾರೆ.
ಕೋವಿಡ್-19 ನಿಂದಾಗಿ ಆರ್ಥಿಕ ಸಂಕಷ್ಟದ ನಡುವೆಯೂ ಸಹ ಸರ್ಕಾರ ಪ್ರಕೃತಿ ವಿಕೋಪದಿಂದ ಹಾನಿಯಾದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿದೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾಹಿತಿ ನೀಡಿದ್ದಾರೆ.