ಗ್ರಾ.ಪಂ ಚುನಾವಣೆ : ಕೋವಿಡ್ ಸೋಂಕಿತರು ಮಾಹಿತಿ ನೀಡಲು ಮನವಿ

10/12/2020

ಮಡಿಕೇರಿ ಡಿ.10 : ಗ್ರಾ.ಪಂ ಚುನಾವಣೆ ಸಂಬಂಧ ಕೋವಿಡ್ ಸೋಂಕಿತರು ಮತದಾನ ದಿನದಂದು ಮತಗಟ್ಟೆಗೆ ತೆರಳಿ ಮತದಾನ ಮಾಡಲು ಇಚ್ಛಿಸಿದ್ದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಮಾರ್ಗಸೂಚಿ ಸಿದ್ಧಪಡಿಸಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಕೋವಿಡ್-19 ಸೋಂಕಿತರು ಮತದಾನ ದಿನದಂದು ಸಂಜೆ 4 ರಿಂದ 5 ಗಂಟೆ ಅವಧಿಯಲ್ಲಿ ಮತದಾನ ಮಾಡಲು ಅವಕಾಶ ನೀಡಿದ್ದು, ಆ ದಿಸೆಯಲ್ಲಿ ಜಿಲ್ಲಾಡಳಿತದಿಂದ ಮಾರ್ಗಸೂಚಿ ತಯಾರಿಸಿದೆ ಎಂದರು.
ಹೋಂ ಐಸೋಲೇಷನ್, ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಯಲ್ಲಿ ಇರುವ ಕೋವಿಡ್-19 ಸೋಂಕಿತರು ತಮ್ಮ ವ್ಯಾಪ್ತಿಯ ಗ್ರಾ.ಪಂ.ಪಿಡಿಒಗಳಿಗೆ ಮಾಹಿತಿ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದರು.
ಮೊದಲ ಹಂತದಲ್ಲಿ ನಡೆಯುವ ಮಡಿಕೇರಿ ಮತ್ತು ಸೋಮವಾರಪೇಟೆ ಗ್ರಾ.ಪಂ.ಚುನಾವಣೆಗೆ ಸಂಬಂಧಿಸಿದಂತೆ ಡಿಸೆಂಬರ್, 20 ರೊಳಗೆ ಮತ್ತು ಎರಡನೇ ಹಂತದಲ್ಲಿ ನಡೆಯುವ ವಿರಾಜಪೇಟೆ ಗ್ರಾ.ಪಂ.ಚುನಾವಣೆಗೆ ಡಿಸೆಂಬರ್, 25 ರೊಳಗೆ ಪಿಡಿಒ ಗಳಿಗೆ ಮಾಹಿತಿ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಕೋವಿಡ್-19 ಸೋಂಕಿತರು ಪಿಡಿಒಗಳಿಗೆ ಮಾಹಿತಿ ನೀಡಿದ ನಂತರ ಸಂಬಂಧಪಟ್ಟ ತಾಲ್ಲೂಕಿನ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಪಿಡಿಒಗಳು ಮಾಹಿತಿ ನೀಡಬೇಕು. ಮಾಹಿತಿ ನೀಡಿದ ನಂತರ ಮತದಾನದಂದು ಸಂಜೆ 4 ರಿಂದ 5 ಗಂಟೆ ಅವಧಿಯಲ್ಲಿ ಸೋಂಕಿತರನ್ನು ಪಿಪಿಇ ಕಿಟ್ ಧರಿಸಿ ವಾಹನದಲ್ಲಿ ಮತಗಟ್ಟೆ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಮತಗಟ್ಟೆ ತಲುಪಿದ ನಂತರ ಮತಗಟ್ಟೆಯಲ್ಲಿನ ಆರೋಗ್ಯ ಕಾರ್ಯಕರ್ತರು ಬರಮಾಡಿಕೊಂಡು, ಈ ವ್ಯಾಪ್ತಿಯ ಮತದಾರರೇ ಎಂಬುದನ್ನು ಖಚಿತಪಡಿಸಿಕೊಂಡು ಮತದಾನಕ್ಕೆ ಅವಕಾಶ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಕೈಗವಸು ಹಾಕಿಕೊಂಡು ಮತ ಚಲಾಯಿಸಲು ಅವಕಾಶ ಮಾಡಲಾಗುತ್ತದೆ. ಬಳಿಕ ಕೈಗವಸನ್ನು ಡಸ್ಟ್‍ಬಿನ್‍ಗೆ ಹಾಕಿ ಮತ್ತೊಂದು ಕೈಗವಸು ಹಾಕಿಕೊಂಡು ವಾಹನಕ್ಕೆ ವಾಪಸ್ಸು ಕರೆದುಕೊಂಡು ಹೋಗಲಾಗುತ್ತದೆ. ಬಳಿಕ ಮತಗಟ್ಟೆ ಕೇಂದ್ರವನ್ನು ಸ್ಯಾನಿಟೈಸರ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳು ಇಂತಿದೆ.
ಪರಸ್ಪರ ಮುಟ್ಟದೆ ಶುಭಾಶಯವನ್ನು ತಿಳಿಸುವುದು. ದೈಹಿಕ ಅಂತರ ಕಾಯ್ದುಕೊಳ್ಳುವುದು, ಮರು ಉಪಯೋಗಿಸಲ್ಪಡಬಹುದಾದ ಫೇಸ್ ಕವರ್ ಅಥವಾ ಮಾಸ್ಕ್‍ನ್ನು ಬಳಸುವುದು. ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟುವುದನ್ನು ಆದಷ್ಟು ತಡೆಯುವುದು, ಉಸಿರಾಟದ ನೈರ್ಮಲ್ಯತೆಯನ್ನು ಕಾಪಾಡುವುದು, ಕೈಗಳನ್ನು ಆಗಿಂದಾಗ್ಗೆ ಸಂಪೂರ್ಣವಾಗಿ ತೊಳೆದುಕೊಳ್ಳುವುದು. ತಂಬಾಕು, ಖೈನಿ ಇತರೆ ಜಗಿಯುವುದನ್ನು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಆಗ್ಗಾಗ್ಗೆ ಮುಟ್ಟಲ್ಪಡುವ ಜಾಗಗಳನ್ನು ನಿಯಮಿತವಾಗಿ ಶುಚಿಗೊಳಿಸುವುದು, ಅನಗತ್ಯ ಪ್ರಯಾಣವನ್ನು ತಪ್ಪಿಸುವುದು, ಯಾರೋಬ್ಬರನ್ನು ತಾರತಮ್ಯದಿಂದ ನೋಡಬಾರದು. ಗುಂಪು ಗೂಡಬಾರದು. ಸುರಕ್ಷಣೆಗೆ ಆದ್ಯತೆ ನೀಡುವುದು. ಪರಿಶೀಲಿಸದ ಹಾಗೂ ನಕಾರಾತ್ಮಕ ಮಾಹಿತಿಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಸರಿಸಬಾರದು. ಕೋವಿಡ್-19 ರ ಬಗ್ಗೆ ಅಧಿಕೃತ ಮಾಹಿತಿ ಪಡೆಯುವುದು. ಟೋಲ್ ಫ್ರೀ ರಾಷ್ಟ್ರೀಯ ದೂ.ಸಂ 1075 ಅಥವಾ ರಾಜ್ಯ ಆರೋಗ್ಯ ಸಹಾಯವಾಣಿ ಸಂಖ್ಯೆ 104 ಹಾಗೂ ಆಪ್ತಮಿತ್ರ ಸಹಾಯವಾಣಿ ಸಂಖ್ಯೆ 14410 ನ್ನು ಸಂಪರ್ಕಿಸುವುದು. ಒತ್ತಡ ಮತ್ತು ಆತಂಕ ನಿವಾರಣೆಗೆ ಮಾನಸಿಕ, ಸಾಮಾಜಿಕ ಸಲಹೆ ಪಡೆದುಕೊಳ್ಳುವುದು.