ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನದ ಮೂಲಸೌಕರ್ಯಕ್ಕೆ ಅನುದಾನ ನೀಡಲು ಎಂಎಲ್‍ಸಿ ವೀಣಾ ಅಚ್ಚಯ್ಯ ಮನವಿ

10/12/2020

ಮಡಿಕೇರಿ ಡಿ.10 : ಕೊಡಗು ಜಿಲ್ಲೆಯಲ್ಲಿ ಮುಜರಾಯಿ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳು ಯಾವುವು, ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ಸಂಭವಿಸಿದ ಪ್ರಾಕೃತಿ ವಿಕೋಪದಿಂದಾಗಿ ಈ ದೇವಸ್ಥಾನಗಳಲ್ಲಿ ಹಾಳಾಗಿರುವ ಮೂಲ ಸೌಕರ್ಯಗಳನ್ನು ಪುನರ್ ಕಲ್ಪಿಸಲು ಮಂಜೂರು ಮಾಡಲಾದ ಅನುದಾನ ಎಷ್ಟು ಎಂದು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ವಿದಾನ ಪರಿಷತ್‍ನಲ್ಲಿ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವರು ಕೊಡಗು ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ 7 ದೇವಾಲಯಗಳಿರುತ್ತವೆ. ಮಡಿಕೇರಿ ತಾಲ್ಲೂಕಿನ ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯ, ನಾಪೋಕ್ಲು, ಕುಂಜಿಲ ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನ, ಶ್ರೀಓಂಕಾರೇಶ್ವರ ದೇವಸ್ಥಾನ ಮತ್ತು ಛತ್ರ, ಮಡಿಕೇರಿ ಪಟ್ಟಣ, ಪಾಲೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ, ವಿರಾಜಪೇಟೆ ತಾಲ್ಲೂಕು ಕುರುಚಿ ಶ್ರೀ ರಾಮೇಶ್ವರ ದೇವಾಲಯ, ಮಡಿಕೇರಿ ರಾಜರ ಗದ್ದುಗೆ, ಪಾಲೂರು ಶ್ರೀ ಹರಿಶ್ಚಂದ್ರ ದೇವಾಲಯ (ಶ್ರೀ ಅಗಸ್ತೇಶ್ವರ ದೇವಾಲಯ).
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಈ ದೇವಸ್ಥಾನಗಳಲ್ಲಿ ಹಾಳಾಗಿರುವ ಮೂಲ ಸೌಕರ್ಯ ಪುನರ್ ಕಲ್ಪಿಸಲು ಸರ್ಕಾರದಿಂದ ಅನುದಾನ ಮಂಜೂರಾಗಿರುವುದಿಲ್ಲ.
ಮೂಲ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಇದುವರೆಗೂ ಅನುದಾನ ದೊರೆಯದ ದೇವಸ್ಥಾನಗಳಿಗೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿಯಾದರೂ ವಿಶೇಷ ಅನುದಾನವನ್ನು ನೀಡುಲಾಗುವುದೇ ಎಂದು ಪ್ರಶ್ನಿಸಿದರು.
ಇದಕ್ಕೆ ಸಚಿವರು ಕೋವಿಡ್-19 ವೈರಸ್ ಹಿನ್ನೆಲೆಯಲ್ಲಿ ಅನುದಾನದ ಕೊರತೆ ಇರುತ್ತದೆ. ಆದ್ದರಿಂದ ವಿಶೇಷ ಅನುದಾನವನ್ನು ನೀಡುವ ಕುರಿತು ಸರ್ಕಾರದ ಹಂತದಲ್ಲಿ ಪ್ರಸ್ತಾವನೆ ಇರುವುದಿಲ್ಲ ಎಂದು ಮಾಹಿತಿ ನೀಡಿದರು.