ತೋಟಗಾರಿಕೆ ನರ್ಸರಿ ತರಬೇತಿಗೆ ಅರ್ಜಿ ಆಹ್ವಾನ

ಮಡಿಕೇರಿ ಡಿ.10 : ಜಿಲ್ಲೆಯಲ್ಲಿ ಕಾಫಿ, ಕಾಳುಮೆಣಸು, ಅಡಿಕೆ, ಕಿತ್ತಳೆ, ಬೆಣ್ಣೆಹಣ್ಣು, ಏಲಕ್ಕಿ, ಸಿಲ್ವರ್, ಅಲಂಕಾರಿಕ, ಆರ್ಕಿಡ್ಸ್ ಮತ್ತು ಕಾಡು ಜಾತಿಯ ನರ್ಸರಿ ಗಿಡಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಹೊರ ಜಿಲ್ಲೆಗಳಿಂದ ಖರೀದಿಸಿದ ಗಿಡಗಳಿಗೆ ದರ ಜಾಸ್ತಿ ಮತ್ತು ಗುಣಮಟ್ಟ ಅಷ್ಟಕ್ಕಷ್ಟೆ.
ಆದ್ದರಿಂದ ಜಿಲ್ಲೆಯ ಬೇಡಿಕೆಯನ್ನು ಸ್ಥಳೀಯವಾಗಿಯೇ ಪೂರೈಸಿದರೆ ಹೊಸದಾಗಿ ನರ್ಸರಿ ಮಾಡುವವರಿಗೆ ಆರ್ಥಿಕ ಸದೃಢತೆ ನೀಡುವುದರೊಂದಿಗೆ, ನರ್ಸರಿ ಅಧಾರಿತ ಉದ್ದಿಮೆಗೆ ಬೇಕಾದ ಮಾನವ ಸಂಪನ್ಮೂಲ ಅಭಿವೃದ್ಧಿಯಾಗುತ್ತದೆ. ಇದಕ್ಕಾಗಿ ಅವಶ್ಯವಿರುವ ಜ್ಞಾನ, ಕೌಶಲ್ಯತೆ, ತರಬೇತಿ, ಮಾರ್ಗದರ್ಶನವನ್ನು ನೀಡುವುದಕ್ಕಾಗಿ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದಲ್ಲಿ 25 ದಿನಗಳ ಉಚಿತ ತರಬೇತಿ ಕಾರ್ಯಕ್ರm ಆಯೋಜಿಸಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರ ತಿಳಿಸಿದೆ.
ಆಸಕ್ತಿಯುಳ್ಳ ಕೊಡಗು ಜಿಲ್ಲೆಯ ರೈತರು, ರೈತ ಮಹಿಳೆಯರು, ಯುವಕರು ಮತ್ತು ಯುವತಿಯರು, ಮೊಬೈಲ್ ಮತ್ತು ಕಂಪ್ಯೂಟರ್ ಜ್ಞಾನವುಳ್ಳ ವಿದ್ಯಾವಂತರು, ಈ ತೋಟಗಾರಿಕೆ ನರ್ಸರಿ ತರಬೇತಿಗೆ ಅರ್ಹರು. ಡಿಸೆಂಬರ್ 18 ರೊಳಗೆ ನಿಗದಿತ ಮಾದರಿಯಲ್ಲಿ ಅರ್ಜಿ ಸಲ್ಲಿಸಬಹುದು. 20 ಮಂದಿ ಅಭ್ಯರ್ಥಿಗಳಿಗೆ ಮಾತ್ರ ಸಿಮೀತವಾಗಿರುವುದರಿಂದ, ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹೆಚ್ಚಿನ ಅರ್ಜಿಗಳು ಬಂದರೆ ಡಿಸೆಂಬರ್, 21 ರಿಂದ ಬೆಳಗ್ಗೆ 10.30 ಗಂಟೆಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ತರಬೇತಿ ನೀಡುವ ವಿಷಯಗಳು: ವೈಜ್ಞಾನಿಕವಾಗಿ ಕಾಫಿ, ಕಾಳುಮೆಣಸು, ಆಡಿಕೆ ನರ್ಸರಿ ಮಾಡುವುದು. ವಿವಿಧ ಸಸ್ಯಾಭಿವೃದ್ಧಿ ವಿಧಾನಗಳು (ಕಡ್ದಿ, ಕಸಿ, ಕಣ್ಣು ಕಸಿ, ಗೂಟಿ) ಅಭ್ಯಾಸ ಮಾಡಿಸುವುದು. ಬೇರು ಬರಿಸಲು ಸಸ್ಯ ಪ್ರಚೋದಕಗಳ ಬಳಕೆ. ಪ್ರೋಟ್ರೇ ನರ್ಸರಿ ವಿಧಾನದಿಂದ ತರಕಾರಿ ಸಸಿಗಳ ಉತ್ಪಾದನೆ. ಆರ್ಕಿಡ್ ಮತ್ತು ಆಂಥೋರಿಯಂ ಪುಷ್ಪಗಳ ಪಾಲನೆ ಮತ್ತು ನರ್ಸರಿ.
ಅಲಂಕಾರಿಕ ಗಿಡಗಳ ನರ್ಸರಿ ಮತ್ತು ಪಾಲನೆ. ಕಾಡು ಜಾತಿ ಮರಗಳ ನರ್ಸರಿ ಮತ್ತು ಸಂರಕ್ಷಣೆ. ವಿವಿಧ ಬೆಳೆಗಳಿಗೆ ಮಾಧ್ಯಮ ತಯಾರಿಕೆ. ನರ್ಸರಿಯಲ್ಲಿ ನೆರಳು, ಬೆಳಕು, ತೇವಾಂಶ, ಗೊಬ್ಬರ, ನೀರು, ರೋಗ ಮತ್ತು ಕೀಟ ನಿರ್ವಹಣೆ. ಸಂಪನ್ಮೂಲ ವ್ಯಕ್ತಿಗಳಿಂದ ನರ್ಸರಿ ಕುರಿತು ಉಪನ್ಯಾಸ ವಿವಿಧ ತರಕಾರಿ, ಹಣ್ಣು, ಪುಷ್ಪ, ಆರಣ್ಯ ನರ್ಸರಿಗಳಿಗೆ ಬೇಟಿ, ಪಾಲಿಹೌಸ್ ಮನೆಯ ನಿರ್ಮಾಣ ಮತ್ತು ಸಸಿಗಳ ಉತ್ಪಾದನೆ, ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಯಲ್ಲಿ ನರ್ಸರಿ ನಿರ್ವಹಣೆ. ನರ್ಸರಿ ನೋಂದಣಿ, ರೆಕಾರ್ಡ್ಗಳು, ಬಿಲ್ಲಿಂಗ್ ನಿರ್ವಹಣೆ ಮುಂತಾದವು.
ಹೆಚ್ಚಿನ ಮಾಹಿತಿಗೆ ಬಿ.ಪ್ರಭಾಕರ, ತೋಟಗಾರಿಕ ವಿಷಯ ತಜ್ಞರು, ಮೊಬೈಲ್ ಸಂಖ್ಯೆ 7259240293 ಅಥವಾ ಕಚೇರಿ ಸಂಖೈ 08274 247274 ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಕಚೇರಿ ಸಮಯದಲ್ಲಿ (ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ವರಗೆ) ನೇರವಾಗಿ ಅಥವಾ ಅಂಚೆ ಮುಖಾಂತರ ಕಳಿಸುವವರು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು-571213 ವಿಳಾಸಕ್ಕೆ ಅಥವಾ ಮಿಂಚಂಚೆ:iihrkvkgk@gmail.com ಗೆ ತಮ್ಮ ಅರ್ಜಿಗಳನ್ನು ಕಳುಹಿಸಬಹುದು.
ಅರ್ಜಿಯಲ್ಲಿ(ಎ4 ಹಾಳೆಯಲ್ಲಿ) ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಎಸ್ಎಸ್ಎಲ್ಸಿ, ಪಿ.ಯು.ಸಿ, ಬಿ.ಎಸ್ಸಿ ಅಂಕಪಟ್ಟಿ ಪ್ರತಿ, ಆಧಾರ್ ಪ್ರತಿ, ನರ್ಸರಿಯಲ್ಲಿ ಯಾವುದಾದರು ಅನುಭವ ಇದ್ದರೆ ಮಾಹಿತಿ ನೀಡುವುದು. ಎರಡು ಇತ್ತೀಚಿನ ಭಾವಚಿತ್ರ ಲಗತ್ತಿಸುವುದು.
ತರಬೇತಿಯಲ್ಲಿ ಸಂಪೂರ್ಣವಾಗಿ ಭಾಗವಹಿಸಿ (25 ದಿವಸದ ಶೇ.100ರ ಹಾಜರಿ ಕಡ್ಡಾಯ) ಮುಗಿಸುವವರಿಗೆ ಕೊನೆಯಲ್ಲಿ ಆನ್ಲೈನ್/ ಲಿಖಿತ ಮತ್ತು ಸಂದರ್ಶನ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ಯಶಸ್ವಿಯಾಗಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಭಾರತೀಯ ಕೃಷಿ ಕೌಶಲ್ಯಾಭಿವೃದ್ಧಿ ಸಂಸ್ಥೆಯಿಂದ ಪ್ರಮಾಣ ಪತ್ರ ನೀಡಲಾಗುವುದು. ಈ ಯಶಸ್ವಿ ಅಭ್ಯರ್ಥಿಗಳಿಗೆ ಮುಂದೆ ನರ್ಸರಿ ಉದ್ದಿಮೆ ಕೈಗೊಳ್ಳಲು ಮಾರ್ಗದರ್ಶನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.