ಕಸ್ತೂರಿರಂಗನ್ ವರದಿ ಯಥಾಸ್ಥಿತಿ ಒಪ್ಪಲು ಸಾಧ್ಯವಿಲ್ಲ : ಸಚಿವ ಆನಂದ ಸಿಂಗ್

December 10, 2020

ಮಡಿಕೇರಿ: ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಅಂತಿಮ ಅಧಿಸೂಚನೆ ಹೊರಡಿಸುವ ಮೊದಲು, ಕರಡು ಅಧಿಸೂಚನೆಯಲ್ಲಿ ಒಳಗೊಂಡಿರುವ ಅಂಶಗಳನ್ನು ರಾಜ್ಯದೊಂದಿಗೆ ಹಂಚಿಕೊಳ್ಳುವಂತೆ ಮನವಿ ಮಾಡಲಾಗಿದ್ದು, ಇದುವರೆಗೂ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆಯನ್ನು ಹೊರಡಿಸಿಲ್ಲ ಎಂದು ರಾಜ್ಯ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಮಂಡಲದ ಅಧಿವೇಶನದಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ವಿಷಯ ಪ್ರಸ್ತಾಪಿಸಿ, ಕಸ್ತೂರಿ ರಂಗನ್ ವರದಿ ಪಶ್ಚಿಮ ಘಟ್ಟದ ಅನೇಕ ಜಿಲ್ಲೆ ಮತ್ತು ತಾಲೂಕುಗಳಲ್ಲಿ ವಾಸಿಸುತ್ತಿರುವ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಹಾಗೂ ಮೂಲ ನಿವಾಸಿಗಳಿಗೆ ತುಂಬಾ ಆತಂಕವನ್ನು ಉಂಟುಮಾಡಿದ್ದು ಇದರಿಂದ ಆ ಭಾಗದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ ಮತ್ತು ಅಲ್ಲಿಯೇ ವಾಸಿಸುತ್ತಿರುವ ವಾಸಿಗಳು ತಮ್ಮ ಬದುಕಿನಲ್ಲಿ ಹತಾಶರಾಗಿದ್ದಾರೆ. ಈ ವರದಿಯು ಅವೈಜ್ಞಾನಿಕವಾಗಿದ್ದು ಯಾವುದೇ ಮಾನದಂಡಗಳನ್ನು ಅನುಸರಿಸಿರುವುದಿಲ್ಲ. ಆದ್ದರಿಂದ ಕಸ್ತೂರಿ ರಂಗನ್ ವರದಿಯ ಕುರಿತು ಸರಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಆನಂದ್ ಸಿಂಗ್ ಅವರು, ಡಾ. ಕೆ. ಕಸ್ತೂರಿ ರಂಗನ್ ಅವರು ಪಶ್ಚಿಮಘಟ್ಟ ಪ್ರದೇಶದ ಸಂರಕ್ಷಣೆಗಾಗಿ ನೀಡಿರುವ ವರದಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು 2014ರ ಮಾ.10ರಂದು ಮೊದಲ ಅಧಿಸೂಚನೆ ಹೊರಡಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ವತಿಯಿಂದ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ತದನಂತರ ಕೇಂದ್ರ ಸರ್ಕಾರವು 2015ರ ಸೆ.4ರಂದು ದ್ವಿತೀಯ ಹಾಗೂ 2017ರ ಫೆ.28ರಂದು ಮೂರನೇ ಬಾರಿಗೆ ಕರಡು ಅಧಿಸೂಚನೆಗಳನ್ನು ಹೊರಡಿಸಿದ್ದು, ಇವುಗಳಿಗೂ ರಾಜ್ಯ ಸರಕಾರ ಆಕ್ಷೇಪಣೆಗಳನ್ನು ಸಲ್ಲಿಸಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು 2018ರ ಅ.3ರಂದು ನಾಲ್ಕನೇ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಇದಕ್ಕೆ 2018ರ ಡಿ. 29ರಂದು ಪತ್ರ ಬರೆದಿರುವ ರಾಜ್ಯ ಸರಕಾರ ತನ್ನ ಆಕ್ಷೇಪಣೆಗಳನ್ನು ಸಲ್ಲಿಸುವುದರೊಂದಿಗೆ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸುವಂತೆ ಕೋರಿದೆ. ಅಲ್ಲದೆ 2020ರ ಮೇ 21ರಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ವೈಪರೀತ್ಯ ಖಾತೆಯ ಸಚಿವರು ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರೊಂದಿಗೆ ನಡೆಸಿದ ಸಂದರ್ಭದಲ್ಲೂ ಪಶ್ಚಿಮ ಘಟ್ಟಗಳು ಹರಡಿಕೊಂಡಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ನವದೆಹಲಿಗೆ ಆಹ್ವಾನಿಸಿ, ಅವರೊಂದಿಗೆ ಸಭೆ ನಡೆಸಿ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವ ಆನಂದ್ ಸಿಂಗ್ ವಿವರಿಸಿದರು.

ಪ್ರಸ್ತಾವನೆಗೆ ಸಂಬಂಧಿಸಿದಂತೆ 2020ರ ಜು.27ರಂದು ಕೇಂದ್ರ ಸರಕಾರಕ್ಕೆ ಬರೆದಿರುವ ಪತ್ರದಲ್ಲಿ, ಕೇಂದ್ರ ಸರಕಾರ ಹೊರಡಿಸಿರುವ 2103ರ ನ.13ರ ಪತ್ರದ ಮೂಲಕ ವಿಧಿಸಿರುವ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಹಾಗೂ ಪ್ರಸ್ತುತ ಅಧಿಸೂಚನೆಯು ಇರುವ ರೀತಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲದಿರುವುದರಿಂದ ಆ ಅಧಿಸೂಚನೆಯನ್ನು ರದ್ದುಪಡಿಸುವಂತೆ ಕೋರಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರವು ಅಂತಿಮ ಅಧಿಸೂಚನೆಯನ್ನು ಹೊರಡಿಸುವ ಮೊದಲು, ಕರಡು ಅಧಿಸೂಚನೆ ಒಳಗೊಂಡಿರುವ ಅಂಶಗಳನ್ನು ರಾಜ್ಯದೊಂದಿಗೆ ಹಂಚಿಕೊಳ್ಳುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಇದುವರೆಗೆ ಅಚಿತಿಮ ಅಧಿಸೂಚನೆಯನ್ನು ಕೇಂದ್ರ ಸರಕಾರ ಹೊರಡಿಸಿಲ್ಲ ಎಂದು ಸಚಿವ ಆನಂದ್ ಸಿಂಗ್ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಸ್ಪಷ್ಟಪಡಿಸಿದರು.

error: Content is protected !!