ಹೊರ ಜಿಲ್ಲೆ ವ್ಯಾಪಾರಿಗಳಿಗೆ ಕಡಿವಾಣ ಹಾಕಿ : ಕೊಡಗು ಬೀದಿ ಬದಿ ವ್ಯಾಪಾರಿಗಳ ಆಗ್ರಹ

December 11, 2020

ಮಡಿಕೇರಿ ಡಿ.11 : ಹೊರ ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳು ನಿಯಮ ಮೀರಿ ಕೊಡಗು ಜಿಲ್ಲೆಯಲ್ಲಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದರಿಂದ ಸ್ಥಳೀಯ ಬೀದಿ ಬದಿ ವ್ಯಾಪಾರಿಗಳು ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಕೊಡಗು ಜಿಲ್ಲಾ ಘಟಕದ ಮಾಧ್ಯಮ ಸಲಹೆಗಾರ ಕೆ.ಟಿ.ಶ್ರೀನಿವಾಸ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಧಿಕಾರಿಗಳು ಹೊರ ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಹಾಸನ, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪಾರಿಗಳು ಕೊಡಗಿನ ಪ್ರಮುಖ ಪಟ್ಟಣಗಳಿಗೆ ಆಗಮಿಸಿ ಹಣ್ಣು, ತರಕಾರಿ ಹಾಗೂ ವ್ಯಾಪಾರ ವಾಹಿವಾಟು ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ಬೀದಿ ಬದಿ ವ್ಯಾಪಾರಿಗಳಿಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಇಲಾಖೆಗಳ ಮೂಲಕ ಸಿಗುವ ಸೌಲಭ್ಯಗಳನ್ನು ಕೂಡ ಬೇನಾಮಿ ಹೆಸರಿನಲ್ಲಿ ಹೊರ ಜಿಲ್ಲೆಯ ವ್ಯಾಪಾರಿಗಳು ಪಡೆದುಕೊಳ್ಳುತ್ತಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದರು.
ನಕಲಿ ಬೀದಿಬದಿ ವ್ಯಾಪಾರಿಗಳ ಹಾವಳಿಯಿಂದಾಗಿ ಜಿಲ್ಲೆಯ ಮೂಲ ಬೀದಿಬದಿ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿ ಕೂಲಿ ಕೆಲಸದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಜಿಲ್ಲೆಯ ಮೂಲ ಬೀದಿಬದಿ ವ್ಯಾಪಾರಿಗಳ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಹೊರಜಿಲ್ಲೆಯ ಹಾಗೂ ನಕಲಿ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿ ಕಾನೂನಿನಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
::: ಆತ್ಮ ನಿರ್ಭರ ದುರುಪಯೋಗ :::
ಕೇಂದ್ರ ಸರ್ಕಾರದ ‘ಆತ್ಮ ನಿರ್ಭರ’ ಯೋಜನೆಯಡಿ 10 ಸಾವಿರ ರೂ. ಸಹಾಯಧನವನ್ನು ಮಳಿಗೆಗಳಲ್ಲಿ ವ್ಯಾಪಾರ ಮಾಡುವ ಶ್ರೀಮಂತ ವರ್ತಕರು ಕೂಡ ಪಡೆದುಕೊಳ್ಳುತ್ತಿದ್ದು, ಇದರಿಂದ ಜಿಲ್ಲೆಯ ಬೀದಿಬದಿ ವ್ಯಾಪಾರಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದರು. ನಗರಸಭೆ ಹಾಗೂ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಆರ್.ಜಗದೀಶ್ ಮಾತನಾಡಿ, ಹೊರ ಜಿಲ್ಲೆಯ ಬೀದಿಬದಿ ವ್ಯಾಪರಿಗಳಿಂದಾಗಿ ಮೂಲ ಬೀದಿ ಬದಿ ವ್ಯಾಪಾರಿಗಳಿಗೆ ಧಕ್ಕೆಯಾಗಿದೆ. ಹೊರಗಿನ ವ್ಯಾಪಾರಿಗಳಿಗೆ ಜಿಲ್ಲೆಯಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ಕೊಡಬಾರದು, ವ್ಯಾಪಾರ ಮಾಡಿದ ನಂತರ ಹಾಳಾದ ಹಣ್ಣು ಮತ್ತು ತರಕಾರಿಗಳ ತ್ಯಾಜ್ಯಗಳನ್ನು ತಾವು ವ್ಯಾಪಾರ ಮಾಡಿದ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಬಿಸಾಡಿ ಅಶುಚಿತ್ವ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಕೋವಿಡ್ ಪರಿಸ್ಥಿತಿಯಿಂದಾಗಿ ಬೀದಿಬದಿ ವ್ಯಾಪಾರಿಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ನೀಡಲಾಗುತ್ತಿರುವ ಪ್ರೋತ್ಸಾಹ ಧನವನ್ನು ಹೆಚ್ಚಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕೆ.ಕೆ.ದಿನೇಶ್, ಕಾರ್ಯದರ್ಶಿ ಆರ್.ವಿ. ಸತೀಶ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಎಂ.ಆರ್.ಅಯೂಬ್ ಹಾಗೂ ಕುಶಾಲನಗರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಣಿ ರಮೇಶ್ ಉಪಸ್ಥಿತರಿದ್ದರು.

error: Content is protected !!