ಡಾ.ಕಸ್ತೂರಿರಂಗನ್ ವರದಿ ಯಥಾವತ್ ಜಾರಿ ಅಸಾಧ್ಯ : ರವಿಕುಶಾಲಪ್ಪ ಅಭಿಪ್ರಾಯ : ಕಾರ್ಯಪಡೆಯ ಅಧ್ಯಕ್ಷರನ್ನು ಆತ್ಮೀಯವಾಗಿ ಸ್ವಾಗತಿಸಿದ ಕಾರ್ಯಕರ್ತರು

11/12/2020

ಮಡಿಕೇರಿ ಡಿ.11 : ಡಾ.ಕಸ್ತೂರಿರಂಗನ್ ವರದಿಯ ಕುರಿತು ಕೂಲಂಕುಷ ಅಧ್ಯಯನ ನಡೆಸಿದ ನಂತರವಷ್ಟೇ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ ಎಂದು ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಹೇಳಿದ್ದಾರೆ. ಕಾರ್ಯಪಡೆಯ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಮಡಿಕೇರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಪಶ್ಚಿಮ ಘಟ್ಟ ಸಾಲುಗಳ ಜೀವ ವೈವಿಧ್ಯ ಮತ್ತು ಅಮೂಲ್ಯ ಪ್ರಾಕೃತಿಕ ಸಂಪತ್ತನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ಪ್ರಸ್ತುತ ಕಸ್ತೂರಿ ರಂಗನ್ ವರದಿಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ ವೈಮಾನಿಕ ಸಮೀಕ್ಷೆ ನಡೆಸಿ ಪಶ್ಚಿಮ ಘಟ್ಟಗಳ ಗಡಿ ಗುರುತಿಸಿದರೆ ಜಿಲ್ಲೆಯ ಜನರ ಕಾಫಿ ತೋಟಗಳು ಕೂಡ ಅರಣ್ಯವಾಗಿ ಕಾಣುತ್ತವೆ. ಆದ್ದರಿಂದ ವರದಿಯನ್ನು ಯಥಾ ಪ್ರಕಾರ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಾಮ ಮಟ್ಟದಿಂದಲೇ ಗ್ರಾಮ ಸಭೆ ನಡೆಸಿ ಗ್ರಾಮದ ಜನ ವಸತಿಯ ಬೇಲಿಯಿಂದ ಮುಂದೆ ಮಾತ್ರವೇ ಈ ವರದಿ ಅನುಷ್ಟಾನ ಮಾಡಬೇಕಿದೆ ಎಂದರು. ಜನರು, ವನ್ಯ ಪ್ರಾಣಿಗಳು ಮತ್ತು ಜೀವ ಸಂಕುಲ ಕೂಡ ಪ್ರಕೃತಿಯ ಒಂದು ಭಾಗವಾಗಿದೆ. ಹೀಗಾಗಿ ಅರಣ್ಯ ಪ್ರದೇಶದ ಅಂಚಿನಲ್ಲಿ ವಾಸಿಸುತ್ತಿರುವವರಿಗೂ ಸೂಕ್ತ ಮೂಲಭೂತ ಸೌಕರ್ಯಗಳು ಸಿಗಲೇ ಬೇಕಿದೆ. ಆ ನಿಟ್ಟಿನಲ್ಲಿ ಹಕ್ಕು ಪತ್ರ ವಂಚಿತ ಜನರಿಗೆ ಹಕ್ಕು ಪತ್ರಗಳನ್ನು ನೀಡಲು ಕೂಡ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರವಿಕುಶಾಲಪ್ಪ ಹೇಳಿದರು.
ಈಗಾಗಲೇ ಮಡಿಕೇರಿಯಲ್ಲಿ 11 ಸಾವಿರ ಎಕರೆ ಸಿಎನ್‍ಡಿ ಭೂಮಿ ಇದೆ ಎಂದು ಗುರುತಿಸಲಾಗಿದ್ದು, ಅದನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆಯುವ ಪ್ರಕ್ರಿಯೆಗಳು ಆರಂಭವಾಗಿದೆ. ಹೀಗಾಗಿ ಜಿಲ್ಲೆಯ ಜನರಿಗೆ ಸಿಎನ್‍ಡಿ ಭೂಮಿಯ ಬಗ್ಗೆ ಯಾವುದೇ ಗೊಂದಲಗಳು ಬೇಡ ಎಂದು ಹೇಳಿದರು. ಈಗಾಗಲೇ ಫಾರಂ ನಂಬರ್ 57 ಅಡಿಯಲ್ಲಿ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಮತ್ತೆ ಕೆಲವರು ಕಾರಣಾಂತರಗಳಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಕೆಗೆ ಮತ್ತೆ 2 ತಿಂಗಳ ಹೆಚ್ಚಿನ ಕಾಲಾವಕಾಶ ನೀಡುವಂತೆ ಜಿಲ್ಲೆಯ ಶಾಸಕರು, ಕಂದಾಯ ಸಚಿವರು, ಕೇಂದ್ರ ಸಚಿವ ಸದಾನಂದ ಗೌಡ ಅವರನ್ನೂ ಕೋರುವುದಾಗಿ ರವಿ ಕುಶಾಲಪ್ಪ ಹೇಳಿದರು.
ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುವ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೂ ಇದ್ದಾರೆ. ಆನೆ ಮಾನವ ಸಂಘರ್ಷ, ವನ್ಯ ಪ್ರಾಣಿ ಹಾವಳಿ ಸೇರಿದಂತೆ ಜಿಲ್ಲೆಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಪ್ರಯತ್ನ ಮಾಡುವುದಾಗಿ ಹೇಳಿದರು.
ಪಕ್ಷದ ಕೇಂದ್ರ ಮುಖಂಡರು, ಸಂಘ ಪರಿವಾರ, ಮುಖ್ಯಮಂತ್ರಿಗಳು, ಜಿಲ್ಲೆಯ ಶಾಸಕರು ತಮ್ಮ ಮೇಲೆ ವಿಶ್ವಾಸ ವಿಟ್ಟು ಈ ಉನ್ನತ ಹುದ್ದೆಯನ್ನು ನೀಡಿದ್ದು, ಅವರ ನಂಬಿಕೆಗೆ ಧಕ್ಕೆಬಾರದ ರೀತಿಯಲ್ಲಿ ಉತ್ತಮ್ಮ ಕೆಲಸ ಮಾಡುವುದಾಗಿ ಇದೇ ಸಂದರ್ಭ ರವಿಕುಶಾಲಪ್ಪ ಭರವಸೆ ನೀಡಿದರು.
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತತದಲ್ಲಿ ಪಕ್ಷ ಪ್ರಮುಖರು ಮತ್ತು ಕಾರ್ಯಕರ್ತರು ಆತ್ಮೀಯವಾಗಿ ಬರ ಮಾಡಿಕೊಂಡರು.
ಬಳಿಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಗುಡ್ಡೆಮನೆ ಅಪ್ಪಯ್ಯ ಗೌಡ, ಜನರಲ್ ತಿಮ್ಮಯ್ಯ, ಮೇಜರ್ ಮಂಗೇರಿರ ಮುತ್ತಣ್ಣ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಕಾರ್ಯಕರ್ತರೊಂದಿಗೆ ನಗರದ ಶ್ರೀ ಕೋಟೆ ಗಣಪತಿ ದೇವಾಲಯಕ್ಕೆ ತೆರಳಿದ ರವಿ ಕುಶಾಲಪ್ಪ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಮಡಿಕೇರಿ ಆರ್.ಎಂ.ಸಿ ಅಧ್ಯಕ್ಷ ಬೆಪ್ಪುರನ ಮೇದಪ್ಪ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ನಗರಾಧ್ಯಕ್ಷ ಮನು ಮಂಜುನಾಥ್, ಪಕ್ಷ ಪ್ರಮುಖದಾರ ಕಿಮ್ಮುಡಿರ ಜಗದೀಶ್, ಡೀನ್ ಬೋಪಣ್ಣ, ಪೊನ್ನಚ್ಚನ ಮಧು, ಅನಿತಾ ಪೂವಯ್ಯ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.