ಈಡಿ ದುರ್ಬಳಕೆ ಆರೋಪ : ಮಡಿಕೇರಿಯಲ್ಲಿ ಪಿಎಫ್ಐ ಪ್ರತಿಭಟನೆ

ಮಡಿಕೇರಿ ಡಿ.11 : ಸರ್ಕಾರದ ಈಡಿ ಹಾಗೂ ಇತರ ಏಜೆನ್ಸಿಗಳನ್ನು ಪಾಪ್ಯುಲರ್ ಫ್ರಂಟ್ ವಿರುದ್ಧ ಅಸ್ತ್ರವಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಇಂದಿರಾಗಾಂಧಿ ವೃತ್ತದಲ್ಲಿ ಜಮಾಯಿಸಿದ ಸಂಘಟನೆಯ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಪಿಎಫ್ಐ ಜಿಲ್ಲಾಧ್ಯಕ್ಷ ಶೌಕತ್ ಆಲಿ ಮಾತನಾಡಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರಕಾರದ ತಪ್ಪುಗಳನ್ನು ವಿರೋಧಿಸುವವರ ವಿರುದ್ಧ ಜಾರಿ ನಿರ್ದೇಶನಾಲಯ (ಈ.ಡಿ) ಮತ್ತು ಸರಕಾರಿ ಏಜೆನ್ಸಿಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಪಾಪ್ಯುಲರ್ ಫ್ರಂಟ್ ನಾಯಕರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಈಡಿ ನಡೆಸಿರುವ ದಾಳಿಗಳೂ ಇದರ ಮುಂದುವರಿದ ಭಾಗವಾಗಿದೆ ಎಂದ ಅವರು ಈ ದಾಳಿ ಏಜೆನ್ಸಿಗಳನ್ನು ಸ್ವತಂತ್ರವಾಗಿ ಕಾರ್ಯಾಚರಿಸಲು ಬಿಡುತ್ತಿಲ್ಲ. ಬದಲಾಗಿ ಬಿಜೆಪಿಯ ಅಸ್ತ್ರವಾಗಿ ಕಾರ್ಯಾಚರಿಸುತ್ತಿದೆ ಎಂದು ಟೀಕಿಸಿದರು.
ಪಿಎಫ್ಐ ಎಲ್ಲಾ ಸಮುದಾಯಗಳ ಸಬಲೀಕರಣಕ್ಕಾಗಿ ದುಡಿಯುವ ಸಂಘಟನೆಯಾಗಿದ್ದು, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಸರ್ಕಾರಿ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸುತ್ತಿದೆ ಎಂದರು.
ಪಿಎಫ್ಐ ನ ಜಿಲ್ಲಾ ಕಾರ್ಯದರ್ಶಿ ತುಫೆಲ್, ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮಿನ್ ಮೊಹ್ಸಿನ್, ಜಿಲ್ಲಾಧ್ಯಕ್ಷ ಮನ್ಸೂರ್, ಕಾರ್ಯದರ್ಶಿ ಅಬ್ದುಲ್ ಅಡ್ಕರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
