ಸಂಪಾಜೆ ಗ್ರಾ.ಪಂ ಜನರೇಟರ್ ಕಳವು : ಆರೋಪಿ ಬಂಧನ

11/12/2020

ಮಡಿಕೇರಿ ಡಿ.11 : ಸಂಪಾಜೆ ಗ್ರಾಮ ಪಂಚಾಯಿತಿ ಕಚೇರಿಯಿಂದ ಜನರೇಟರ್ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಳ್ಯ ತಾಲೂಕಿನ ಗಡಿಕಲ್ಲು ನಿವಾಸಿ ಕೆ.ಎಸ್. ನಾರಾಯಣ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 44,495 ರೂ. ಮೌಲ್ಯದ ಜನರೇಟರ್ ಮತ್ತು ಕೃತ್ಯಕ್ಕೆ ಬಳಸಿದ್ದ ಮಾರುತಿ ಆಲ್ಟೋ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಪಾಜೆ ಗ್ರಾಮ ಪಂಚಾಯಿತಿ ವತಿಯಿಂದ ಕಚೇರಿ ಕೆಲಸಕ್ಕಾಗಿ 2012ರಲ್ಲಿ ಜನರೇಟರ್ ಒಂದನ್ನು ಖರೀದಿಸಲಾಗಿತ್ತು. 2020ರ ಜುಲೈ ತಿಂಗಳ 31ರಂದು ಜನರೇಟರ್ ರೂಂ.ಗೆ ಪಂಚಾಯಿತಿ ಸಿಬ್ಬಂದಿ ಗಣೇಶ್ ಎಂಬವರು ಬೀಗ ಹಾಕಿದ್ದರು. ಬಳಿಕ ಆಗಸ್ಟ್ 6ರಂದು ಜನರೇಟರ್ ರೂಂ ತೆರೆದಾಗ ಜನರೇಟರ್ ಕಳುವಾಗಿರುವುದು ಕಂಡು ಬಂದಿತ್ತು. ಈ ಬಗ್ಗೆ ಪಂಚಾಯಿತಿ ಪಿಡಿಓ ಶೋಭಾ ರಾಣಿ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೆಲವು ತಾಂತ್ರಿಕ ಸಾಕ್ಷಿಗಳನ್ನು ಕಲೆ ಹಾಕಿದ್ದರು. ಅದರಂತೆ ಡಿ.10ರಂದು ಆರೋಪಿ ಮಡಿಕೇರಿ ಜನರಲ್ ತಿಮ್ಮಯ್ಯ ವೃತ್ತದ ಬಳಿ ಇರುವ ಮಾಹಿತಿ ಆಧರಿಸಿ ಕೆ.ಎಸ್. ನಾರಾಯಣ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಸಂದರ್ಭ ಆರೋಪಿ ಜನರೇಟರ್ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ 44,495 ರೂ. ಮೌಲ್ಯದ ಜನರೇಟರ್ ಮತ್ತು ಅದನ್ನು ಸಾಗಾಟ ಮಾಡಲು ಬಳಿಸಿದ್ದ ಮಾರುತಿ ಆಲ್ಟೋ ಕಾರು(ಕೆ.ಎ.21-ಝೆಡ್0671) ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜನರೇಟರ್ ಕಳವು ಆರೋಪಿಯನ್ನು ಇದೀಗ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಚಂದ್ರಶೇಖರ್, ಸದಾಶಿವ ಸಿಬ್ಬಂದಿಗಳಾದ ರವಿ ಕುಮಾರ್, ಅಂತೋಣಿ, ಮಂಜುನಾಥ್, ಸೋಮಶೇಖರ್ ಅವರುಗಳು ಕಾರ್ಯಾಚರಣೆ ನಡೆಸಿದ್ದರು.