ಕಾವೇರಿದ ಬಸ್ ನೌಕರರ ಮುಷ್ಕರ

12/12/2020

ಬೆಂಗಳೂರು ಡಿ.12 : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಲವು ಸಾರಿಗೆ ಸಂಘಟನೆಗಳು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು.
ಮುಷ್ಕರ ಪ್ರಯಾಣಿಕರಷ್ಟೇ ಅಲ್ಲದೇ ಸರ್ಕಾರದ ಮಟ್ಟದಲ್ಲೂ ಗೊಂದಲ ಮೂಡಿಸಿತು. ಮುಷ್ಕರ ಮುಂದುವರೆಯುತ್ತದೆಯೋ ಇಲ್ಲವೋ ಎನ್ನುವ ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾಗಿದೆ. ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿ ಹಳ್ಳಿ ಚಂದ್ರಶೇಖರ್ ಮತ್ತಿತರರು ಮುಷ್ಕರಕ್ಕೆ ಕರೆ ನೀಡಿದ್ದು, ಎಐಟಿಸಿಯು ಮುಖಂಡ ಅನಂತ ಸುಬ್ಬರಾವ್ ಮತ್ತಿತರರರು ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದರು.
ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಜವಾಬ್ದಾರಿ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರ ಜತೆ ಸಭೆ ನಡೆಸಿದರು. ಆದರೆ ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರ ಜತೆ ಮಾತುಕತೆ ನಡೆಸದೇ, ಎ.ಐ.ಟಿ.ಯು.ಸಿ ಮುಖಂಡ ಅನಂತ ಸುಬ್ಬರಾವ್, ಸಿ.ಐ.ಟಿ.ಯು. ಮುಖಂಡ ಪ್ರಕಾಶ್, ಮಹಾಮಂಡಲದ ಪ್ರತಿನಿಧಿಗಳು, ಭಾರತೀಯ ಮಜ್ದೂರ್ ಸಂಘದ ಶ್ರೀ ಪೂಂಜಾ ಅವರ ಜತೆ ಸಮಾಲೋಚಿಸಿದರು. ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷ ಚಂದ್ರಪ್ಪ, ಬಿ.ಎಂ.ಟಿ.ಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಸಾರಿಗೆ ಇಲಾಖೆಯ ಉನ್ನತ ಅಧಿಕಾರಗಳ ಜತೆ ಚರ್ಚೆ ನಡೆಸಿದರು.