ಮಠಗಳನ್ನು ದುರ್ಬಲಗೊಳಿಸುವುದನ್ನು ಸಹಿಸಲು ಸಾಧ್ಯವಿಲ್ಲ : ಶ್ರೀಸಿದ್ಧಲಿಂಗಸ್ವಾಮೀಜಿ ಅಸಮಾಧಾನ

December 12, 2020

ಸೋಮವಾರಪೇಟೆ ಡಿ.12 : ಮಠ ಮಾನ್ಯಗಳನ್ನು ದುರ್ಬಲಗೊಳಿಸುವ ಹುನ್ನಾರ ಸಹಿಸಲು ಸಾಧ್ಯವಿಲ್ಲ ಎಂದು ಸಿದ್ಧಗಂಗಾ ಮಠಾಧೀಶರಾದ ಶ್ರೀಸಿದ್ಧಲಿಂಗಸ್ವಾಮೀಜಿ ತಿಳಿಸಿದ್ದಾರೆ.
ಆಲೂರುಸಿದ್ದಾಪುರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ದಾಸೋಹ ಸೇವೆಯಲ್ಲಿ ಮಠಗಳು ತಮ್ಮನ್ನು ತೊಡಗಿಸಿಕೊಂಡಿವೆ. ಅಂತಹ ಮಠಗಳನ್ನು ಕೆಲವು ಅಧಿಕಾರಿಗಳು ದುರ್ಬಲ ಗೊಳಿಸಲು ಹೊರಟಿರುವುದು ದುರಾದೃಷ್ಟಕರವೆಂದರು.
ಕೊಡಗು ಜಿಲ್ಲೆಯಲ್ಲಿ ರಾಜರುಗಳ ಕಾಲದಿಂದಲೂ ಮಠಗಳಿವೆ, ಅವುಗಳಿಗೆ ಅಂದಿನ ರಾಜರ ಕೊಡುಗೆ ಬಹಳಷ್ಟಿವೆ ಎಂದ ಸ್ವಾಮೀಜಿ ಹಿಂದೆ ಜಿಲ್ಲೆಯಲ್ಲಿ 63 ಮಠಗಳಿದ್ದವು, ಆದರೆ ಇಂದು ಬೆರಳೆಣಿಕೆಯಷ್ಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಹಾಗೂ ಅಧಿಕಾರಿಗಳು ಮಠಗಳಿಗೆ ಶಕ್ತಿತುಂಬುವ ಕೆಲಸ ಮಾಡಬೇಕೆ ಹೊರತು ದುರ್ಬಲಗೊಳಿಸಲು ಹೋಗಬಾರದು. ವಿರಾಜಪೇಟೆಯ ಅರಮೇರಿಕಳಂಚೇರಿ ಮಠಕ್ಕೆ ನೂರಾರುವರ್ಷಗಳ ಇತಿಹಾಸವಿದೆ ಹಾಗೂ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದೆ. ಹೀಗಿರುವಾಗ ಹಿಂದಿನ ಜಿಲ್ಲಾಧಿಕಾರಿಯೊಬ್ಬರು ಮಠದ ಆಸ್ತಿಯನ್ನು ಸರ್ಕಾರಿ ಜಾಗವೆಂದು ಬೇರೆ ಉದ್ದೇಶಕ್ಕೆ ನೀಡಿ ಆದೇಶಿಸಿರುವುದು ಕಾನೂನು ಬಾಹಿರ ಇದನ್ನು ಎಲ್ಲರು ಖಂಡಿಸಲೇಬೇಕಾಗಿದೆ. ಇಲ್ಲಿಯವರೆಗೆ ಮಠದ ಸುಪರ್ದಿಯಲ್ಲಿರುವ ಜಮೀನು ಸರ್ಕಾರಿ ಆಸ್ತಿಯಾಗುವುದು ಹೇಗೆ ಎಂದು ಸ್ವಾಮೀಜಿ ಪ್ರಶ್ನಿಸಿದರು.
ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದರೂ ಅಧಿಕಾರಿಗಳು ಮಠಗಳಿಗೆ ತೊಂದರೆ ನೀಡುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

error: Content is protected !!