ಕೈಗೆ ಬಂದ ಭತ್ತ ಮಾರಲು ಸಿಗಲಿಲ್ಲ : ಕೋಪಟ್ಟಿ ಗ್ರಾಮದಲ್ಲಿ ಕಾಡಾನೆಗಳ ದಾಂಧಲೆ : ಫಸಲು ಸಂಪೂರ್ಣ ನಾಶ

December 12, 2020

ಮಡಿಕೇರಿ ಡಿ.12 : ದಕ್ಷಿಣ ಕೊಡಗಿನ ವಿವಿಧೆಡೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸುತ್ತಿದ್ದ ಕಾಡಾನೆಗಳ ಹಿಂಡು ಈಗ ಭತ್ತದ ಫಸಲು ತುಂಬಿರುವ ಭಾಗಮಂಡಲದ ಕೋಪಟ್ಟಿ ಗ್ರಾಮಕ್ಕೆ ಲಗ್ಗೆ ಇಟ್ಟಿದೆ.
ಕಳೆದ ಒಂದು ವಾರದಿಂದ ಗ್ರಾಮದಲ್ಲಿ ದಾಂಧಲೆ ನಡೆಸುತ್ತಿರುವ ಸುಮಾರು 8 ರಿಂದ 10 ಆನೆಗಳು ಭತ್ತದ ಫಸಲನ್ನು ಸಂಪೂರ್ಣವಾಗಿ ನಾಶ ಪಡಿಸಿದೆ. ಸ್ಥಳೀಯ ಕೃಷಿಕರಾದ ದಾಯನ ಹರ್ಷವರ್ಧನ ಹಾಗೂ ಉತ್ತಪ್ಪ ಸಹೋದರರ ಗದ್ದೆಯಲ್ಲಿದ್ದ ಸುಮಾರು 80 ಬಟ್ಟಿ ಭತ್ತವನ್ನು ಆನೆಗಳ ಹಿಂಡು ತಿಂದು ತೇಗಿದೆ. ಗ್ರಾಮದ ತೋಟಗಳಲ್ಲಿ ನಿರಾತಂಕವಾಗಿ ಸಂಚರಿಸುತ್ತಿರುವ ಕಾಡಾನೆಗಳು ಕಾಫಿ ಗಿಡಗಳಿಗೂ ಹಾನಿ ಮಾಡಿವೆ.
ಗ್ರಾಮದ ಗದ್ದೆಗಳಲ್ಲಿ ಭತ್ತ ತುಂಬಿದ್ದು, ಕೊಯ್ಲು ಮಾಡುವ ಹೊತ್ತಿನಲ್ಲೇ ಫಸಲು ಕಾಡಾನೆಗಳ ಪಾಲಾಗಿದೆ. ಈ ದಿಢೀರ್ ಬೆಳವಣಿಗೆಯಿಂದ ಆತಂಕಗೊಂಡಿರುವ ಗ್ರಾಮಸ್ಥರು ಮನೆಯಿಂದ ಹೊರ ಬರಲಾಗದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ತಕ್ಷಣ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ನಷ್ಟ ಅನುಭವಿಸಿರುವ ರೈತರು ಒತ್ತಾಯಿಸಿದ್ದಾರೆ. ಪ್ರತಿದಿನ ಒಂದಲ್ಲ ಒಂದು ಗದ್ದೆ, ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿರುವ ಕಾಡಾನೆಗಳ ಬಗ್ಗೆ ಇಲಾಖೆಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

error: Content is protected !!