‘ಪಿಗ್ಮಿ’ ಸಂಗ್ರಹಗಾರರ ಮೇಲೆ ಬ್ಯಾಂಕ್‍ಗಳ ಒತ್ತಡ : ಕೊಡಗು ಪಿಗ್ಮಿ ಸಂಗ್ರಹಗಾರರ ಸಂಘ ಆರೋಪ

December 12, 2020

ಮಡಿಕೇರಿ ಡಿ.12 : ಕೊರೋನಾ ಸಂಕಷ್ಟದ ಪರಿಸ್ಥಿತಿಯಿಂದ ವಸೂಲಾಗದ ಸಾಲದ ಹೊಣೆಗಾರಿಕೆಯನ್ನು ‘ಪಿಗ್ಮಿ’ ಸಂಗ್ರಹಗಾರರ ಮೇಲೆ ಹಾಕುವ ಮೂಲಕ ಕೆಲವು ಬ್ಯಾಂಕ್‍ಗಳು ಕಾನೂನು ಬಾಹಿರ ಕ್ರಮಗಳನ್ನು ಅನುಸರಿಸುತ್ತಿವೆ ಎಂದು ಕೊಡಗು ಜಿಲ್ಲಾ ಪಿಗ್ಮಿ ಸಂಗ್ರಹಗಾರರ ಸಂಘ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಡಿ.ನಾಣಯ್ಯ, ಪಿಗ್ಮಿ ಗ್ರಾಹಕರು ಪಡೆದ ಸಾಲವನ್ನು ವಸೂಲಿ ಮಾಡಿಕೊಡುವಂತೆ ಪಿಗ್ಮಿ ಸಂಗ್ರಹಗಾರರ ಮೇಲೆ ಒತ್ತಡ ಹೇರುವುದಲ್ಲದೆ ಕಮಿಷನ್ ಹಣವನ್ನು ಬಿಡುಗಡೆ ಮಾಡದೆ ಹಿಡಿದಿಟ್ಟುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಪಿಗ್ಮಿ ಸಂಗ್ರಹಕಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಂಘದ ಅವಶ್ಯಕತೆ ಇರುವುದನ್ನು ಮನಗಂಡು ಸಂಘವನ್ನು ರಚಿಸಲಾಗಿತ್ತು. ಸಂಘ ರಚನೆಯಾಗುವ ಮೊದಲು ಪಿಗ್ಮಿ ಸಂಗ್ರಹಿಸಿದ ಹಣಕ್ಕೆ ಶೇ.3 ರಂತೆ ಕಮಿಷನ್ ನೀಡಲಾಗುತ್ತಿತ್ತು. ಆದರೆ ಸಂಘ ರಚನೆಯಾದ ನಂತರ ಏಕಾಏಕಿ ಪಿಗ್ಮಿ ಸಂಗ್ರಹಗಾರರ ಕಮಿಷನ್ ಹಣದ ಮೊತ್ತವನ್ನು ಶೇ.3 ರಿಂದ ಶೇ.2ಕ್ಕೆ ಇಳಿಸಿರುವುದಲ್ಲದೇ ಅದರಲ್ಲಿಯೂ ಶೇ.50 ರಷ್ಟು ಮತ್ತು ಕೆಲವೊಂದು ಬ್ಯಾಂಕಿನವರು ಶೇ.75 ರಷ್ಟು ಹಿಡಿದಿಟ್ಟುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಹಕರು ಪಡೆದುಕೊಂಡ ಸಾಲಕ್ಕೆ ಬ್ಯಾಂಕಿನ ನಿಯಮದಂತೆ ಅವರದ್ದೇ ಆದ ಇಬ್ಬರು ಜಾಮೀನುದಾರರು ಮತ್ತು ಖಾಲಿ ಚೆಕ್ಕನ್ನು ನೀಡಿರುತ್ತಾರೆ. ಆದರೆ, ಗ್ರಾಹಕರು ಪಡೆದುಕೊಂಡ ಸಾಲಕ್ಕೆ ಪಿಗ್ಮಿ ಸಂಗ್ರಹಗಾರರು ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲವೊಂದು ಬ್ಯಾಂಕಿನ ಶಾಖೆಯಲ್ಲಿ ಪಿಗ್ಮಿ ಸಂಗ್ರಹಗಾರರನ್ನು, ಸಂಘಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಬರೆದುಕೊಡಬೇಕೆಂದು ಒತ್ತಡ ಹೇರಲಾಗುತ್ತಿದೆ. ಪಿಗ್ಮಿ ಸಂಗ್ರಹಗಾರರಿಗೆ ಬ್ಯಾಂಕಿನವರು ನೀಡುವ ಕಮಿಷನ್ ಅಲ್ಲದೆ ಬೇರೆ ಯಾವುದೇ ರೀತಿಯ ಸವಲತ್ತುಗಳು ಇಲ್ಲದೇ ಜೀವನೋಪಯಕ್ಕಾಗಿ ಪರದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಕೃತಿಕ ವಿಕೋಪದ ಸಂಕಷ್ಟಗಳಿಂದ ಹೊರ ಬಂದು ಸುಧಾರಣೆ ಕಾಣುತ್ತಿರುವಾಗಲೇ ಕೋವಿಡ್‍ನಿಂದಾಗಿ ಮತ್ತೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದೇವೆ. ಸಂಘ ಯಾವುದೇ ಸಂಸ್ಥೆಯ ವಿರುದ್ಧ ಇಲ್ಲ, ಕೇವಲ ಸದಸ್ಯರ ಹಿತ ಕಾಪಾಡುವ ದೃಷ್ಟಿಯಿಂದ ಸ್ಥಾಪನೆಯಾಗಿದೆಯಷ್ಟೆ ಎಂದು ತಿಳಿಸಿದ ನಾಣಯ್ಯ, ಪಿಗ್ಮಿ ಸಂಗ್ರಹಗಾರರ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಕಾನೂನಿನ ಮೊರೆ ಹೋಗಲು ಚಿಂತನೆ ನಡೆಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಪಿ.ಎ.ಮಂಜುನಾಥ್, ನಿರ್ದೇಶಕ ಎಂ.ಆರ್. ಜಯಪ್ರಕಾಶ್, ಸದಸ್ಯರಾದ ಬಿ.ಬಿ.ಗಿರೀಶ್ ರೈ, ಕೆ.ಎಂ.ದೇವಯ್ಯ ಹಾಗೂ ಎಂ.ಎ.ಮುರುಗೇಶ್ ಉಪಸ್ಥಿತರಿದ್ದರು.

error: Content is protected !!