ಮುಂದುವರಿದ ಕೆಎಸ್‍ಆರ್‍ಟಿಸಿ ನೌಕರರ ಮುಷ್ಕರ : ಮಡಿಕೇರಿಯಲ್ಲಿ 2 ನೇ ದಿನನವೂ ಪ್ರತಿಭಟನೆ : ಸರ್ಕಾರದ ವಿರುದ್ಧ ಅಸಮಾಧಾನ

December 12, 2020

ಮಡಿಕೇರಿ ಡಿ.12 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‍ಆರ್‍ಟಿಸಿ)ಯ ಉದ್ಯೋಗಿಗಳನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನವೂ ಮುಂದುವರೆದ ಹಿನ್ನೆಲೆ ಮಡಿಕೇರಿಯಲ್ಲಿ ಸರ್ಕಾರಿ ಬಸ್‍ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.
ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಬಸ್ ನಿರ್ವಾಹಕ ಚಂದ್ರಶೇಖರ್ ಮಾತನಾಡಿ, ಸಾರಿಗೆ ಬಸ್ ನೌಕರರಿಗೆ ವೇತನ ನೀಡುವಲ್ಲಿ ಸರ್ಕಾರ ನಿರಂತರವಾಗಿ ತಾರತಮ್ಯ ಮಾಡುತ್ತಿದ್ದು, ಅಧಿಕಾರಿಗಳಿಂದಲೂ ಕಿರುಕುಳ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಬಸ್ ನೌಕರರು ಕೋವಿಡ್‍ನಿಂದ ಮೃತಪಟ್ಟರೆ ರೂ.30 ಲಕ್ಷ ಪರಿಹಾರ ಧನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಮೃತಪಟ್ಟವರ ಕುಟುಂಬಕ್ಕೆ ಇಲ್ಲಿಯವರೆಗೆ ಆರ್ಥಿಕ ನೆರವು ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಕೆಎಸ್‍ಆರ್‍ಟಿಸಿ ಬಸ್ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಘೋಷಣೆ ಮಾಡುವವರೆಗೆ ಮುಷ್ಕರವನ್ನು ಮುಂದುವರೆಸುವುದಾಗಿ ತಿಳಿಸಿದರು.
ಬಸ್ ನಿರ್ವಾಹಕ ಮಧು ಮಾತನಾಡಿ, ನಮ್ಮ ಸಂಸ್ಥೆ ನಮ್ಮ ಹೆಮ್ಮೆ ಎಂದು ಕಾರ್ಯನಿರ್ವಹಿಸುತ್ತಿರುವ ಸಾರಿಗೆ ನೌಕರರನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಷ್ಕರದ ಬಗ್ಗೆ ಮಾಹಿತಿ ತಿಳಿದಿದ್ದ ಪ್ರಯಾಣಿಕರು ಬಸ್ ನಿಲ್ದಾಣದ ಕಡೆ ಮುಖ ಮಾಡಲಿಲ್ಲ. ಖಾಸಗಿ ಬಸ್‍ಗಳು ಮತ್ತು ವಾಹನಗಳು ಇಂದು ಕೂಡ ಪ್ರಯಾಣಿಕರ ನೆರವಿಗೆ ಬಂದವು.

error: Content is protected !!