ಮಾದಾಪುರದಲ್ಲಿ ಚುನಾವಣಾ ನಿಯಮ ಉಲ್ಲಂಘನೆ ಆರೋಪ : ದೂರು ನೀಡಿದ ಎಐಟಿಯುಸಿ

December 12, 2020

ಮಡಿಕೇರಿ ಡಿ.12 : ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿರುವ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಸಂದರ್ಭ ರಾಜಕೀಯ ಪ್ರೇರಿತ ವ್ಯಕ್ತಿಗಳು ಕಾನೂನು ಬಾಹಿರವಾಗಿ ನಡೆದುಕೊಂಡಿರುವ ಪ್ರಕರಣ ಮಾದಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಅನರ್ಹಗೊಳ್ಳಬಹುದಾದ ಮಹಿಳಾ ಅಭ್ಯರ್ಥಿಯೊಬ್ಬರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೊಡಗು ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಆರೋಪಿಸಿದ್ದಾರೆ.
ಈ ಕುರಿತು ತಹಶೀಲ್ದಾರರಿಗೆ ದೂರು ನೀಡಿದ ನಂತರ ಮಾತನಾಡಿದ ಅವರು, ಮಾದಾಪುರ ಗ್ರಾ.ಪಂ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ವೇಳೆ ಕುಂಬೂರು ವಾರ್ಡಿನ ಬಿಸಿಎಂ(ಎ) ಮಹಿಳೆಯೊಬ್ಬರು ತಮ್ಮ ಜಾತಿ ಪ್ರಮಾಣ ಪತ್ರವನ್ನು ನಮೂದಿಸದೇ ಇರುವುದರಿಂದ ಅವರ ಬದಲಿಗೆ ಮತ್ತೋರ್ವ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿತ್ತು. ಆದರೆ ರಾಜಕೀಯ ಪ್ರೇರಿತರೊಬ್ಬರು ಚುನಾವಣಾ ಅಧಿಕಾರಿಗಳಿಗೆ ಕರೆ ಮಾಡಿ ಅನರ್ಹಗೊಳ್ಳಬಹುದಾಗಿದ್ದ ಮಹಿಳೆಯನ್ನು ಮತ್ತೆ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಅಲ್ಲದೆ ಜಾತಿ ದೃಢೀಕರಣ ಪತ್ರ ತರುವಂತೆ ತಿಳಿಸಿದ್ದು, ಇದೊಂದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘಟನೆಯಾಗಿದೆ. ಅಲ್ಲದೆ ದ್ರೋಹದ ರಾಜಕಾರಣವಾಗಿದೆ ಎಂದು ಆರೋಪಿಸಿದರು.
ನಿಗಧಿತ ಅವಧಿಯೊಳಗೆ ನಿಯಮಾನುಸಾರ ಮಾಹಿತಿ ನೀಡದ ಮಹಿಳಾ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಬೇಕು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೋಮಪ್ಪ ಒತ್ತಾಯಿಸಿದ್ದಾರೆ.

error: Content is protected !!