ಮಾಲೀಕರ ಮನೆಯಲ್ಲಿಯೇ ಕಳ್ಳತನ : ಕೂಡುಮಂಗಳೂರು ಗ್ರಾಮದ ನಿವಾಸಿ ಬಂಧನ

December 12, 2020

ಮಡಿಕೇರಿ ಡಿ.12 : ಮಾಲೀಕರ ಮನೆಯಲ್ಲಿಯೇ 4.15 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ತೋಟದ ರೈಟರ್‍ವೊಬ್ಬನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೂಡುಮಂಗಳೂರು ಬಸವನತ್ತೂರು ಗ್ರಾಮದ ನಿವಾಸಿ ದಯಾನಂದ(25) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಕುಶಾಲನಗರ ಕೂಡುಮಂಗಳೂರು ಬಸವನತ್ತೂರು ಗ್ರಾಮದ ತಂಗಮ್ಮ ಎಂಬವರ ತೋಟದಲ್ಲಿ ದಯಾನಂದ ರೈಟರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಎರಡು ತಿಂಗಳಿನಲ್ಲಿ ತಂಗಮ್ಮ ಅವರ ಮನೆಯಲ್ಲಿ 242 ಗ್ರಾಂ ತೂಕದ ಚಿನ್ನಾಭರಣಗಳು ಕಳುವಾಗಿದ್ದು, ಈ ಬಗ್ಗೆ ತಂಗಮ್ಮ ಅವರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತೋಟದ ರೈಟರ್ ದಯಾನಂದನ ಮೇಲೆ ಶಂಕೆ ವ್ಯಕ್ತಪಡಿಸಿ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ಸಂದರ್ಭ ರೈಟರ್ ದಯಾನಂದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯಿಂದ 6 ಚಿನ್ನದ ಚೈನ್, ಒಂದು ಜೊತೆ ಚಿನ್ನದ ಬಳೆ, 1 ಉಂಗುರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 242 ಗ್ರಾಂ ತೂಕದ ಚಿನ್ನಾಭರಣದ ಮೊತ್ತ 4.15 ಲಕ್ಷ ರೂ.ಗಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಶೈಲೇಂದ್ರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಮಹೇಶ್, ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್, ಎಎಸ್‍ಐ ಸ್ವಾಮಿ, ಸಿಬ್ಬಂದಿಗಳಾದ ಶನಂತ, ಶ್ರೀನಿವಾಸ್, ಸಾಫಿನ್ ಅಹ್ಮದ್, ಅಜಿತ್, ಪ್ರವೀಣ್, ಪ್ರಿಯ ಕುಮಾರ್ ಅವರುಗಳು ಕಾರ್ಯಾಚರಣೆ ನಡೆಸಿದ್ದರು.

error: Content is protected !!