ಮಡಿಕೇರಿ RTO ಕಚೇರಿ ಬಳಿ ಬೈಕ್ ಕಳವು : ಆರೋಪಿ ಬಂಧನ

December 13, 2020

ಮಡಿಕೇರಿ ಡಿ.13: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಬ್ಬಿಫಾಲ್ಸ್ ರಸ್ತೆ ನಿವಾಸಿ ಎಂ.ಆರ್.ಉದಯ(21) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಕೆ.ನಿಡುಗಣೆ ನಿವಾಸಿ ಪಿ.ಡಿ.ನವೀನ್ ಎಂಬುವವರು ಅ.18ರಂದು ಅಬ್ಬಿಫಾಲ್ಸ್ ರಸ್ತೆಯ ಆರ್‍ಟಿಓ ಕಚೇರಿ ಮುಂದಿನ ಕ್ಯಾಂಟೀನ್ ಬಳಿ ಆರ್.ಎಕ್ಸ್-100 ಬೈಕ್(ಕೆಎ.02-ಇಹೆಚ್3102) ಅನ್ನು ನಿಲ್ಲಿಸಿ ಮನೆಗೆ ತೆರಳಿದ್ದರು. ಮರು ದಿನ ಬಂದು ನೋಡಿದಾಗ ಬೈಕ್ ನಿಲ್ಲಿಸಿದ್ದ ಸ್ಥಳದಿಂದ ಕಾಣೆಯಾಗಿತ್ತು. ನವೀನ್ ಅ.23ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಎಂ.ಆರ್.ಉದಯ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆರೋಪಿ ಬೈಕ್ ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ 56 ಸಾವಿರ ರೂ. ಮೌಲ್ಯದ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ದಿವಾಕರ್ ಮಾರ್ಗದರ್ಶನದಲ್ಲಿ ಠಾಣಾಧಿಕಾರಿಗಳಾದ ಚಂದ್ರಶೇಖರ್ ಹಾಗೂ ಸದಾಶಿವ, ಸಿಬ್ಬಂದಿಗಳಾದ ರವಿ ಕುಮಾರ್, ಮಂಜುನಾಥ್, ರಾಜೇಶ್, ಸೋಮಶೇಖರ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!