ಕೂರ್ಗ್ ಪ್ರೀಮಿಯರ್ ಸಿ.ಪಿ.ಹೆಚ್.ಎಲ್-2020 ಹಾಕಿ ಪಂದ್ಯಾವಳಿ : ಆಭರಣ್ ಸುದೇವ್ ಅತಿ ಬೇಡಿಕೆಯ ಐಕಾನ್ ಆಟಗಾರ

December 13, 2020

ಮಡಿಕೇರಿ ಡಿ.13 : ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಡಿ.15ರಿಂದ ಪೊನ್ನಂಪೇಟೆಯ ಹಾಕಿ ಕ್ರೀಡಾಂಗಣದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಕೂರ್ಗ್ ಪ್ರೀಮಿಯರ್ ಹಾಕಿ ಲೀಗ್- 2020' (ಸಿ.ಪಿ.ಹೆಚ್.ಎಲ್) ಪಂದ್ಯಾವಳಿಗಾಗಿ 5 ತಂಡಗಳ ಮಾಲಕರು ತಮ್ಮ ತಂಡದ ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಿದರು. ಗೋಣಿಕೊಪ್ಪಲಿನ ಪಾಪೇರಾ ಸಭಾಂಗಣದಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ ಲಕರು ತಮ್ಮ ತಂಡಕ್ಕೆ ಅಗತ್ಯವಿರುವ ತಲಾ 18 ಆಟಗಾರರನ್ನು ನಿಯಮಾನುಸಾರ ಆಯ್ಕೆಗೊಳಿಸಿ ತಂಡದ ಪಟ್ಟಿಯನ್ನು ಪೂರ್ಣಗೊಳಿಸಿದರು. ಈ ಪೈಕಿ ಮೂಲತಃ ಸೋಮವಾರಪೇಟೆಯವರಾದ, ಕಿರಿಯರ ವಿಭಾಗದ ಭಾರತ ಹಾಕಿ ತಂಡದ ಆಟಗಾರ ಆಭರಣ್ ಸುದೇವ್ 19,000 ಅಂಕಗಳೊಂದಿಗೆ ಆಯ್ಕೆಗೊಂಡು ಅಚ್ಚರಿ ಮೂಡಿಸಿದರು. ಉದಯೋನ್ಮುಖ ಆಟಗಾರನಾಗಿ ಇತ್ತೀಚೆಗೆ ಗಮನಸೆಳೆಯುತ್ತಿರುವ ಆಭರಣ್ ಸುದೇವ್ ಅವರನ್ನು ತಮ್ಮ ವಶಪಡಿಸಿಕೊಳ್ಳಲು ಹರಾಜಿನಲ್ಲಿ ಪಾಲ್ಗೊಂಡಿದ್ದ ಎಲ್ಲಾ ತಂಡದ ಮಾಲಕರು ಉತ್ಸಾಹ ತೋರಿದ್ದರು. ಬಹುತೇಕ ತಂಡದ ಮಾಲಕರು ಅಂಕಗಳನ್ನು ನಿರಂತರವಾಗಿ ಹೆಚ್ಚಿಸುತ್ತಲೇ ಮುಂದುವರೆದರೂ ಆಭರಣ್ ಸುದೇವ್ ಅಂತಿಮವಾಗಿ ಬೆಂಗಳೂರಿನ ಗುಮ್ಮಟ್ಟಿರ ಮುತ್ತಣ್ಣ, ದೀಪಕ್ ದೇವಯ್ಯ ಮತ್ತು ಮಧು ಮಂದಣ್ಣ ಅವರ ಮಾಲಕತ್ವದಗೌರ್ಸ್’ ತಂಡದ ಪಾಲಾದರು. ಹೀಗೆ ಇಡೀ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚಿನ ಬೇಡಿಕೆಯ ಆಟಗಾರ ಎಂಬ ಹೆಗ್ಗಳಿಕೆಗೆ ಆಭರಣ್ ಪಾತ್ರರಾದರು.
ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ 5 ತಂಡದ ಮಾಲೀಕರು ಪಾಲ್ಗೊಂಡಿದ್ದರು. ಸಿ. ಪಿ.ಹೆಚ್.ಎಲ್. ಪಂದ್ಯಾವಳಿಗಾಗಿ ನೋಂದಾಯಿಸಲ್ಪಟ್ಟ ಒಟ್ಟು 90 ಆಟಗಾರರ ಪೈಕಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿರುವ 15 ಮಂದಿಯನ್ನು `ಐಕಾನ್’ ಆಟಗಾರರೆಂದು ಪ್ರತ್ಯೇಕಿಸಲಾಗಿತ್ತು.
ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಮಾಲೀಕರು ತಮ್ಮ ತಂಡಗಳಿಗೆ 3 ಐಕಾನ್ ಆಟಗಾರರನ್ನು ಮಾತ್ರ ಹರಾಜಿನಲ್ಲಿ ಪಡೆಯಬೇಕಿದ್ದು, ಈ ಪೈಕಿ ಓರ್ವ ಗೋಲ್ ಕೀಪರ್ ಅನ್ನು ಆಯ್ಕೆಗೊಳಿಸುವುದು ಕಡ್ಡಾಯ ಎಂಬ ನಿಯಮಾವಳಿಯನ್ನು ಪ್ರಕ್ರಿಯೆಯಲ್ಲಿ ಅಳವಡಿಸಲಾಗಿತ್ತು. ಐಕಾನ್ ಆಟಗಾರರ ಮೂಲ ಅಂಕ 8000, ಗರಿಷ್ಠ 21000 ಮತ್ತು ಉಳಿದ ಆಟಗಾರರ ಮೂಲ ಅಂಕ 1000, ಗರಿಷ್ಠ 7000 ಎಂದು ನಿಗದಿಪಡಿಸಲಾಗಿತ್ತು. ಐಕಾನ್ ಆಟಗಾರರನ್ನು ಹೊರತುಪಡಿಸಿ ಉಳಿದ 15 ಆಟಗಾರರ ಆಯ್ಕೆಗಾಗಿ ತಂಡಗಳಿಗೆ ಒಟ್ಟು ತಲಾ 55000 ಅಂಕಗಳಂತೆ ಮಾಲಕರು ಆಟಗಾರರನ್ನು ಆಯ್ಕೆಗೊಳಿಸಬೇಕಾಗಿತ್ತು.

ಈ ನಿಯಮಾವಳಿಯ ಆಧಾರದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮೂಲvಃ ಅಮ್ಮತ್ತಿಯವರಾದ, ಕರ್ನಾಟಕ ಹಾಕಿ ತಂಡದ ಗೋಲ್ ಕೀಪರ್, ಸಾಯಿ ಆಟಗಾರ ಶರತ್ ಸೋಮಣ್ಣ ಅವರು 17,500 ಅಂಕಗಳೊಂದಿಗೆ ಆಯ್ಕೆಯಾಗಿ ಗೋಣಿಕೊಪ್ಪಲಿನ `ಸೌತ್ ಕೂರ್ಗ್’ ತಂಡದ ಪಾಲಾದÀರು. ಅಲ್ಲದೆ, ಹರಾಜಿನಲ್ಲಿ ಎರಡನೇ ಅತಿ ಹೆಚ್ಚಿನ ಬೇಡಿಕೆಯ ಆಟಗಾರ ಎಂದು ಪರಿಗಣಿಸಲ್ಪಟ್ಟರು.

ಮೂಲತಃ ವೀರಾಜಪೇಟೆ ಸಮೀಪದ ಕಂಡಂಗಾಲದವರಾದ, ಕರ್ನಾಟಕ ಹಾಕಿ ತಂಡದ ಮತ್ತೋರ್ವ ಗೋಲ್ ಕೀಪರ್, ಸಾಯಿ ಆಟಗಾರ ಎ.ಸಿ. ಸುಬ್ರಮಣಿ 17,000 ಅಂಕಗಳೊಂದಿಗೆ ಮಾಜಿ ಅಂತರರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ಪಿ. ತಿಮ್ಮಯ್ಯ ಅವರ ಮಾಲಕತ್ವದ ವೀರಾಜಪೇಟೆಯ `ಪ್ರಗತಿ ಸ್ಪೋಟ್ರ್ಸ್ ಅಕಾಡೆಮಿ’ ತಂಡದ ವಶವಾದರು. ಹೀಗೆ 5 ತಂಡದ ಮಾಲಕರು ಒಟ್ಟು ತಲಾ 18 ಆಟಗಾರರನ್ನು ಆಯ್ಕೆಗೊಳಿಸಿ ತಂಡವನ್ನು ಪರಿಪೂರ್ಣಗೊಳಿಸಿದರು.
ಒಟ್ಟು 4 ಗಂಟೆಗಳ ಕಾಲ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮಾಲಕರು ಆರಂಭದಿಂದಲೇ ಆಸಕ್ತಿಯಿಂದ ಪಾಲ್ಗೊಂಡು ತಮ್ಮ ತಂಡಗಳಿಗೆ ಉತ್ತಮ ಆಟಗಾರರನ್ನು ಆಯ್ಕೆಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದ ದೃಶ್ಯ ಕಂಡುಬಂದಿತು.

ಪಂದ್ಯಾವಳಿಯ 5 ತಂಡಗಳ ಆಟಗಾರರಿಗೆ ನೀಡಲಾಗುವ ಕಲರ್ಸ್ ಅನ್ನು (ಸಮವಸ್ತ್ರ) ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಕಲರ್ಸ್ ಅನ್ನು ಕೂಡ ಹರಾಜು ಪ್ರಕ್ರಿಯೆಯಲ್ಲಿ ಪಡೆಯಬೇಕು ಎಂಬ ನಿಯಮಾವಳಿ ಅಳವಡಿಕೆಯಾಗಿದ್ದ ಕಾರಣ ಮಾಲೀಕರು ಅದನ್ನು ಹರಾಜಿನಲ್ಲಿ ಪಡೆಯಬೇಕಾಯಿತು. ಒಂದೇ ಕಲರ್ಸ್‍ಗಾಗಿ ಒಂದಕ್ಕಿಂತ ಹೆಚ್ಚಿನ ತಂಡದ ಮಾಲಕರು ಹರಾಜಿನಲ್ಲಿ ಬೇಡಿಕೆ ಮುಂದಿಟ್ಟರೆ ಅದನ್ನು ಲಾಟರಿ ನಿಯಮಾವಳಿಯಂತೆ ಅಂತಿಮಗೊಳಿಸಲಾಯಿತು.

ಆರಂಭದಲ್ಲಿ ನಡೆದ ಸಮಾರಂಭದಲ್ಲಿ ಹರಾಜು ಪ್ರಕ್ರಿಯೆಯನ್ನು ಜಿ. ಪಂ. ಸದಸ್ಯ ಸಿ.ಕೆ. ಬೋಪಣ್ಣ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡೆಯ ತವರು ಎಂಬ ಖ್ಯಾತಿ ಗಳಿಸಿರುವ ಕೊಡಗು ಜಿಲ್ಲೆಯಲ್ಲಿ ಕ್ರೀಡಾಕೂಟಗಳು ನಿರಂತರವಾಗಿ ನಡೆಯುವಂತಾಗಬೇಕು. ಯುವ ಸಮೂಹವನ್ನು ಸದಾ ಕ್ರಿಯಾಶೀಲಗೊಳಿಸಲು ಕ್ರೀಡೆಗಳಿಂದ ಮಾತ್ರ ಸಾಧ್ಯ. ನಿರಂತರವಾಗಿ ಕ್ರೀಡಾಕೂಟಗಳು ನಡೆದರೆ ಯುವಕರು ಅದರಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರಲ್ಲದೆ, ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಸಿ.ಪಿ.ಎಚ್.ಎಲ್.-2020 ಅನ್ನು ಆಯೋಜಕರು ವಿಭಿನ್ನವಾಗಿ ನಡೆಸಲು ಮುಂದಾಗಿರುವುದು ಶ್ಲಾಘನೀಯ. ಈ ರೀತಿಯ ವಿಭಿನ್ನ ಕ್ರೀಡಾಕೂಟಗಳು ಮತ್ತಷ್ಟು ಜರುಗುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಿ.ಪಿ.ಎಚ್.ಎಲ್.-2020 ಆಯೋಜನಾ ಸಮಿತಿ ಅಧ್ಯಕ್ಷ ಬುಟ್ಟಿಯಂಡ ಎ. ಚಂಗಪ್ಪ, ಪದಾಧಿಕಾರಿಗಳಾದ ಮೂಕಚಂಡ ನಿರನ್ ನಾಚಪ್ಪ, ಸಣ್ಣುವಂಡ ಲೋಕೇಶ್ ಮೊದಲಾದವರು ಹಾಜರಿದ್ದರು.

ಕೊಕ್ಕಂಡ ರೋಶನ್, ಸುಳ್ಳಿಮಾಡ ಸುಬ್ಬಯ್ಯ, ಚೋಯಮಾಡಂಡ ಸನ್ನು, ಚೀಯಕಪೂವಂಡ ಸುಬ್ರಮಣಿ, ಸೋಮಣ್ಣ ಸೇರಿದಂತೆ ಪೊನ್ನಂಪೇಟೆಯ ಸ್ಪೋಟ್ರ್ಸ್ ಹಾಸ್ಟೆಲ್ ವಿದ್ಯಾರ್ಥಿಗಳು ಹರಾಜು ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

error: Content is protected !!