ಕುಟ್ಟಂದಿಯಲ್ಲಿ ದಿನವಿಡೀ ಗುಂಡಿನ ಆರ್ಭಟ : ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾದ ಶೂಟಿಂಗ್ ಸ್ಪರ್ಧೆ : ಕೊಡಗಿನಲ್ಲಿ ಮತ್ತೆ ಜನಪ್ರಿಯಗೊಳ್ಳುತ್ತಿರುವ ಗ್ರಾಮೀಣ ಕ್ರೀಡೆ

December 13, 2020

ಪೊನ್ನಂಪೇಟೆ, ಡಿ.13: ಪ್ರಕೃತಿಯ ಸೆರಗಿನಲ್ಲಿರುವ ವಿಶಾಲವಾದ ಮೈದಾನ ಭಾನುವಾರದಂದು ದಿನವಿಡೀ ಗುಂಡಿನ ಆರ್ಭಟಕ್ಕೆ ಸಾಕ್ಷಿಯಾಯಿತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಸ್ಪರ್ಧಾಳುಗಳು ತಮ್ಮ ಬಂಧೂಕಿನಿಂದ ತೆಂಗಿನಕಾಯಿಗೆ ಗುರಿಮಾಡಿ ಗುಂಡು ಹೊಡೆಯುತ್ತಿದ್ದ ದೃಶ್ಯ ಪ್ರೇಕ್ಷಕರನ್ನು ನಿರಂತರವಾಗಿ ರಂಜಿಸುತ್ತಿತ್ತು. ಮಹಿಳೆ ಮತ್ತು ಪುರುಷರು ಸಮಾನರಾಗಿ ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಒಬ್ಬರಿಗಿಂತ ಒಬ್ಬರು ಗುರಿ ಪ್ರಯೋಗಿಸಿ ತಮ್ಮ ಬಂದೂಕಿನ ಮೂಲಕ ತೆಂಗಿನಕಾಯಿಯನ್ನು ಹೊಡೆದುರುಳಿಸುವ ಪ್ರಯತ್ನ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಮಕ್ಕಳು ಕೂಡ ಗುರಿ ಪ್ರಯೋಗಿಸುವಲ್ಲಿ ಹಿಂದೆ ಬೀಳಲಿಲ್ಲ. ಪ್ರಯೋಗಿಸುವ ಗುರಿ ಯಶಸ್ವಿಯಾದಾಗಲೆಲ್ಲಾ ಮೈದಾನದ ಸುತ್ತು ನೆರೆದಿದ್ದ ಪ್ರೇಕ್ಷಕರ ಸಿಳ್ಳೆ-ಚಪ್ಪಾಳೆಗಳ ಸದ್ದು ಸ್ಪರ್ಧೆಗೆ ವಿಶೇಷ ಮೆರಗು ನೀಡುತ್ತಿತ್ತು.

ಇದು ಬಿಟ್ಟಂಗಾಲ ಸಮೀಪದ ಕುಟ್ಟಂದಿಯ ಕೆ.ಬಿ. ಪ್ರೌಢಶಾಲಾ ಮೈದಾನದಲ್ಲಿ ಪ್ರಗತಿ ಸ್ವಸಹಾಯ ಸಂಘದ ವತಿಯಿಂದ ಹುತ್ತರಿ ಹಬ್ಬದ ಅಂಗವಾಗಿ ಭಾನುವಾರ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯ.

ಆರಂಭದಲ್ಲಿ ನಡೆದ ‘ಪಾಯಿಂಟ್ ಟು ಟು ರೈಫಲ್ಸ್’ ವಿಭಾಗದಲ್ಲಿ ನಿರೀಕ್ಷೆಗೂ ಮೀರಿ ಸ್ಪರ್ಧಿಗಳು ಭಾಗವಹಿಸಿದ್ದರು. ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಒಮ್ಮೆ ಗುರಿ ತಪ್ಪಿದರೆ ಸ್ಪರ್ಧಿಗಳಿಗೆ ಮತ್ತೊಮ್ಮೆ ಗುರಿ ಪ್ರಯೋಗಿಸುವ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಉತ್ಸಾಹದಿಂದ ಭಾಗವಹಿಸಿದ ಸ್ಪರ್ಧಿಗಳು ಮೊದಲ ಗುಂಡು ವಿಫಲಗೊಂಡರೂ, ಮತ್ತೊಂದು ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದರು. ಸ್ಪರ್ಧಿಗಳ ಗುರಿ ವಿಫಲಗೊಂಡಾಗಲೂ ಅವರು ನಿರಾಶರಾಗದೆ ಕ್ರೀಡಾ ಸ್ಪೂರ್ತಿಯಿಂದಲೇ ಉಳಿದ ಸ್ಪರ್ಧಿಗಳಿಗೆ ಹುರಿದುಂಬಿಸುತ್ತಿದ್ದರು.

ಪಾಯಿಂಟ್ ಟು. ಟು.ರೈಫಲ್ಸ್ ವಿಭಾಗದಲ್ಲಿ ಸ್ಪರ್ಧಿಗಳಿಗೆ 50 ಮೀಟರ್ ದೂರದ ಅಂತರ ನಿಗದಿಪಡಿಸಲಾಗಿತ್ತು. ಈ ವಿಭಾಗದಲ್ಲಿ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದು ಕಂಡುಬಂತು. ಮೊದಲ ಸುತ್ತಿನಲ್ಲಿ ತೆಂಗಿನಕಾಯಿಯನ್ನು ಹೊಡೆದುರುಳಿಸಿದವರು ಎರಡನೇ ಹಂತಕ್ಕೆ ಅರ್ಹತೆ ಪಡೆದುಕೊಂಡು ಅಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷಿಸಲು ತಾಳ್ಮೆಯಿಂದಲೇ ಕಾಯುತ್ತಿದ್ದರು.

’12ನೇ ಬೋರಿನ ಕೋವಿ’ ವಿಭಾಗದಲ್ಲಿ ನಿಗದಿಯಾಗಿದ್ದ 30 ಮೀಟರ್ ದೂರದ ಅಂತರದಲ್ಲಿ ಸ್ಪರ್ಧಿಗಳು ತಮ್ಮ ಬಂಧೂಕಿನಿಂದ ಗುರಿ ಪ್ರಯೋಗಿಸುತ್ತಿದ್ದರು. ಅಲ್ಲದೆ, ಇದರೊಂದಿಗೆ ತಮ್ಮ ಗುರಿಯ ಅದೃಷ್ಟ ಪರೀಕ್ಷೆಯೂ ಮಾಡಿಕೊಂಡರು. ಈ ವಿಭಾಗದಲ್ಲಿ ವಯಸ್ಸಿನ ಮಿತಿ ಇಲ್ಲದೆ ಪಾಲ್ಗೊಂಡ ಸ್ಪರ್ಧಿಗಳು ತೆಂಗಿನಕಾಯಿಗೆ ಗುರಿಮಾಡಿ ಗುಂಡು ಹೊಡೆಯುತ್ತಾ, ತಮಗೆ ರಕ್ತಗತವಾಗಿ ಬಂದ ಈ ಕಲೆಯನ್ನು ವಿಶೇಷವಾಗಿ ಪ್ರದರ್ಶಿಸುತ್ತಿದ್ದ ದೃಶ್ಯ ಕಂಡುಬಂತು. 70 ವರ್ಷ ಪ್ರಾಯ ಮೀರಿದವರೂ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಮತ್ತೊಂದು ಮತ್ತೊಂದು ವಿಶೇಷತೆಯಾಗಿತ್ತು. ಪತಿ- ಪತ್ನಿ, ತಂದೆ-ಮಗ, ತಂದೆ- ಮಕ್ಕಳು, ತಾತ-ಮಗ-ಮೊಮ್ಮಗ ಹೀಗೆ ಒಂದೇ ಮನೆಯ ಸದಸ್ಯರು ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರೂ ಆದ ಪ್ರಗತಿ ಸ್ವಸಹಾಯ ಸಂಘದ ಹಿರಿಯ ಸದಸ್ಯರಾದ ಅಪ್ಪಂಡೇರಂಡ ಎನ್. ಪೆಮ್ಮಯ್ಯ ಅವರು ಗುಂಡು ಹಾರಿಸುವ ಮೂಲಕ ಸ್ಪರ್ಧೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಕೊಡಗಿನ ಪುರಾತನ ಗ್ರಾಮೀಣ ಕ್ರೀಡೆಯಾಗಿದೆ. ಮಾಹಿತಿ ತಂತ್ರಜ್ಞಾನಗಳ ಆವಿಷ್ಕಾರದೊಂದಿಗೆ ಆಧುನಿಕ ಕ್ರೀಡೆಗಳು ಹೆಚ್ಚಾದ ಈ ಕಾಲಘಟ್ಟದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಪ್ರಾಶಸ್ತ್ಯ ಇಲ್ಲದಾಗಿದೆ. ಕೊಡಗಿನಲ್ಲಿ ಗ್ರಾಮೀಣ ಕ್ರೀಡಾ ಕೂಟಗಳನ್ನು ನಿರಂತರವಾಗಿ ಆಯೋಜಿಸುವುದರ ಮೂಲಕ ಪುರಾತನ ಕ್ರೀಡೆಯ ಪುನಶ್ಚೇತನ ಸಾಧ್ಯ. ಗ್ರಾಮೀಣ ಕ್ರೀಡಾಕೂಟಗಳಿಂದ ಮಾತ್ರ ನಮ್ಮ ಜನಪದಿಯ ಸೊಗಡಿನ ಸತ್ವ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಗ್ರಾಮದ ಪ್ರಮುಖರಾದ ಅಪ್ಪಂಡೇರಂಡ ಭವ್ಯ ಚಿಟ್ಯಣ್ಣ, ನಿವೃತ್ತ ಶಿಕ್ಷಣಾಧಿಕಾರಿ ಮುಲ್ಲೆಂಗಡ ಕಿಟ್ಟು ಕುಟ್ಟಪ್ಪ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿ ಸಹಾಯ ಸಂಘದ ಪದಾಧಿಕಾರಿಗಳಾದ ಅಪ್ಪಂಡೇರಂಡ ದಿನು, ನಂಬುಡುಮಾಡ ಪವಿ ಪೂವಯ್ಯ, ಚಂದೂರ ಪ್ರಭು, ಅಪ್ಪಂಡೇರಂಡ ಸತಿ, ನಂಬುಡುಮಾಡ ಲವ, ಮುಲ್ಲೆಂಗಡ ಜೀವನ್ ಮತ್ತು ಚಂದೂರ ಸುರೇಶ್ ಅವರು ಸ್ಪರ್ಧೆಯ ಉಸ್ತುವಾರಿ ನೋಡಿಕೊಂಡರು. ಸಂಘದ ಪ್ರಮುಖರಾದ ಎ.ಬಿ. ಮೋಹನ್ ಅವರು ವೀಕ್ಷಕ ವಿವರಣೆ ನೀಡಿದರು. ಬೆಳಿಗ್ಗೆಯಿಂದ ಸಂಜೆವರೆಗೂ ನಡೆದ ಈ ಗ್ರಾಮೀಣ ಸೊಗಡಿನ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದಲೂ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಜನ ಪಾಲ್ಗೊಂಡಿದ್ದರು.

error: Content is protected !!