ಗಜಗಿರಿ ಬೆಟ್ಟ ಕುಸಿತಕ್ಕೆ ಕಾರಣಗಳನ್ನು ನೀಡಿದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ

December 14, 2020

ಮಡಿಕೇರಿ ಡಿ.14 : ಆಗಸ್ಟ್ ತಿಂಗಳಲ್ಲಿ ತಲಕಾವೇರಿಯ ಗಜಗಿರಿ ಬಿಟ್ಟ ಕುಸಿತದ ದುರಂತ ಮತ್ತು ಅದರಿಂದ ಸಂಭವಿಸಿದ ಮಾನವ ಪ್ರಾಣ ಹಾನಿ ಮತ್ತು ಅದಕ್ಕೆ ಕಾರಣವಾದ ಅಂಶಗಳ ಕುರಿತು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿಗಳು ಜಿಲ್ಲಾಡಳಿತಕ್ಕೆ 16 ಪುಟುಗಳ ಪ್ರಾಥಮಿಕ ವೈಜ್ಞಾನಿಕ ವರದಿಯನ್ನು ಸಲ್ಲಿಸಿದ್ದಾರೆ.
ಹಳೆಯ ಭೂ ಕುಸಿತದಲ್ಲಿ ಉಂಟಾದ ಬೆಟ್ಟದ ಮೇಲಿನ ಬಿರುಕುಗಳು, ಅರಣ್ಯ ಇಲಾಖೆಯ ಕಂದಕ, ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿ, ಅನಗತ್ಯ ಮಾನವ ಹಸ್ತಕ್ಷೇಪ, ಸಾಮಾನ್ಯಕ್ಕಿಂತ ಅಧಿಕ ಮಳೆ ಇವುಗಳಿಂದಾಗಿಯೇ ಆಗಸ್ಟ್‍ನಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದಿದೆ ಎನ್ನುವ ಅಂಶವನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರು ಬಹಿರಂಗಪಡಿಸಿದ್ದಾರೆ.

ಆಗಸ್ಟ್ 6ರಂದು ತಲಕಾವೇರಿಯಲ್ಲಿ ಸಂಭವಿಸಿದ ಗಜಗಿರಿ ಬೆಟ್ಟ ಕುಸಿತ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳ ಕೋರಿಕೆ ಹಿನ್ನೆಲೆಯಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರಾದ ಕಪಿಲ್ ಸಿಂಗ್ ಹಾಗೂ ಕಮಲ್ ಕುಮಾರ್ ಅವರ ತಂಡ ಆಗಸ್ಟ್ 14 ಮತ್ತು 15ರಂದು ಭೇಟಿ ನೀಡಿದ್ದರು. ಭೂ ಕುಸಿತ ಸ್ಥಳದಲ್ಲಿ ವಿಸ್ತøತ ಅಧ್ಯಯನ ನಡೆಸಿದ ಇವರುಗಳು ದುರ್ಘಟನೆಗೆ ಕಾರಣವಾದ ಅಂಶಗಳು, ಈ ಹಿಂದೆ ಅದೇ ಸ್ಥಳದಲ್ಲಿ ನಡೆದಿದ್ದ ಅಲ್ಪ ಪ್ರಮಾಣದ ಭೂ ಕುಸಿತದ ಇತಿಹಾಸ, ಮುಂದೆ ಇಂತಹ ದುರಂತಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ವರದಿಯಲ್ಲಿ ಮಾಹಿತಿ ನೀಡಿದ್ದಾರೆ.

ತಲಕಾವೇರಿಯಲ್ಲಿ ಆಗಸ್ಟ್ 6ರಂದು ಸಂಭವಿಸಿದ ಭೂ ಕುಸಿತಕ್ಕೂ ಮೊದಲು 3 ಬಾರಿ ಅಲ್ಲಿ ಇಂಥಹದ್ದೇ ಘಟನೆಗಳು ನಡೆದಿದೆ ಎಂದು ತಮ್ಮ ವರದಿಯಲ್ಲಿ ವಿಜ್ಞಾನಿಗಳು ಉಲ್ಲೇಖಿಸಿದ್ದಾರೆ. ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಮೊದಲ ಭೂ ಕುಸಿತ 2007ರ ಜೂನ್ 30ಕ್ಕೆ ಸಂಭವಿಸಿದರೆ, 2ನೇ ಭೂ ಕುಸಿತ 2018ರಲ್ಲಿ ಹಾಗೂ 3ನೇ ಘಟನೆ 2019ರ ಆಗಸ್ಟ್ 19ಕ್ಕೆ ನಡೆದಿದೆ ಎಂದು ಅಧ್ಯಯನ ವರದಿಯ ವಿವರಗಳನ್ನು ದಾಖಲೆಯಾಗಿ ನೀಡಿದ್ದಾರೆ. ಈ ಎಲ್ಲಾ ಭೂ ಕುಸಿತಗಳ ಮುಂದುವರಿದ ಭಾಗವಾಗಿ 2020ರ ಆಗಸ್ಟ್ 6ರಂದು ಗಜಗಿರಿ ಬೆಟ್ಟ ಕುಸಿದಿದೆ ಎನ್ನುವ ಅಂಶವನ್ನು ತಜ್ಞರು ವರದಿಯಲ್ಲಿ ವಿವರಿಸಿದ್ದಾರೆ. ಅಂದು ಮುಂಜಾನೆಯ 2.30ರ ಸಮಯದಲ್ಲಿ 45 ಮೀ. ಎತ್ತರದಿಂದ 50 ಮೀ. ಅಗಲದಲ್ಲಿ 160 ಮೀ. ಉದ್ದಕ್ಕೆ ಭೂ ಕುಸಿತ ಆಗಿದ್ದು, 2 ಕಿ.ಮೀ. ದೂರದ ತನಕ ಭೂ ಕುಸಿತದ ಪರಿಣಾಮ ವಿಸ್ತಾರ ಆಗಿದೆ ಎಂದು ವಿವರಿಸಲಾಗಿದೆ. ಕಲ್ಲಿನ ಪದರದ ಮೇಲಿನ ಮಣ್ಣು ಭೂ ಕುಸಿತದಲ್ಲಿ ಸಂಪೂರ್ಣವಾಗಿ ಕೊಚ್ಚಿ ಹೋಗಿರುವುದನ್ನು ದಾಖಲಿಸಲಾಗಿದೆ. 2007ರಲ್ಲಿ ಭೂ ಕುಸಿತ ನಡೆದಾಗ ಜಿಎಸ್‍ಐ ಸಂಸ್ಥೆಯ ಹಿರಿಯ ಭೂ ವಿಜ್ಞಾನಿ ಎ.ಕೆ.ಶರ್ಮಾ ಎಂಬವರು ಘಟನಾ ಸ್ಥಳದಲ್ಲಿ ಅಧ್ಯಯನ ನಡೆಸಿ ಬೆಟ್ಟದ ಮೇಲಿನ ಬಿರುಕುಗಳು ಭವಿಷ್ಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಿರುವುದನ್ನು ಕೂಡ ಕಮಲ್ ಕುಮಾರ್ ಮತ್ತು ಕಪಿಲ್ ಸಿಂಗ್ ನೀಡಿರುವ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಘಟನೆಯಲ್ಲಿ ತಲಕಾವೇರಿಯ ಹಿರಿಯ ಅರ್ಚಕ ಟಿ.ಎಸ್. ನಾರಾಯಣಾಚಾರ್ ಸೇರಿ ಐವರು ಸಾವನ್ನಪ್ಪಿದ್ದು, 6 ಜಾನುವಾರು, 1 ನಾಯಿ ಕೂಡ ಮೃತಪಟ್ಟಿದೆ. 2 ಮನೆ, 1 ದನದ ಕೊಟ್ಟಿಗೆ ಮಣ್ಣಿನಡಿಗೆ ಸೇರಿದೆ. ಕೆಳಭಾಗದ ಕಂದಕದಲ್ಲಿರುವ ಅರಣ್ಯ ಪ್ರದೇಶಕ್ಕೂ ಹಾನಿಯಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಭೂ ಕುಸಿತಕ್ಕೆ ಕಾರಣವಾದ ಅಂಶಗಳನ್ನು ಕೂಡ ಜಿಎಸ್‍ಐ ತಜ್ಞರು ವಿವರಿಸಿದ್ದಾರೆ. ಗಜಗಿರಿ ಬೆಟ್ಟದ ಕೆಳಭಾಗ ರಸ್ತೆ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಿತಿಮೀರಿದ ಮಾನವ ಹಸ್ತಕ್ಷೇಪ ನಡೆದಿದೆ. ಅವೈಜ್ಞಾನಿಕ ನಿರ್ಮಾಣಗಳು ಬೆಟ್ಟವನ್ನು ದುರ್ಬಲಗೊಳಿಸಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಳೆದ ವರ್ಷದ(2019) ಭೂ ಕುಸಿತ ಸಂದರ್ಭದಲ್ಲಿ ಬೆಟ್ಟದ ಮೇಲೆ ನಿರ್ಮಾಣವಾದ ಬಿರುಕು ಹಾಗೂ ಅರಣ್ಯ ಇಲಾಖೆಯ ನಿರ್ಮಿಸಿದ ಕಂದಕಗಳ ಮೂಲಕ ನೀರು ಭೂಮಿಯೊಳಕ್ಕೆ ಇಳಿದಿದೆ. ಅತಿಯಾದ ಮಳೆಯಿಂದಲೂ ನೀರು ಭೂಮಿಗೆ ಸೇರಿ ಒತ್ತಡ ನಿರ್ಮಾಣ ಆಗಿದೆ. ಹಳೆಯ ಭೂ ಕುಸಿತದ ಸಂದರ್ಭದಲ್ಲಿ ನಿರ್ಮಾಣ ಆಗಿದ್ದ ಬಿರುಕುಗಳು ಭೂಮಿಯೊಳಗೆ ನೀರು ಇಂಗಿಸಲು ಸಹಕರಿಸಿರುವುದು ಕೂಡ ಭೂ ಕುಸಿತಕ್ಕೆ ಪ್ರಮುಖ ಕಾರಣ ಆಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

::: ಸಲಹೆಗಳು :::

ಈ ವ್ಯಾಪ್ತಿಯಲ್ಲಿ ಸುರಿಯುವ ಭಾರಿ ಮಳೆಯನ್ನು ತಡೆಯುವ ರೀತಿಯಲ್ಲಿ ಸರ್ವಋತು ಉತ್ತಮ ರಸ್ತೆ ನಿರ್ಮಾಣ ಆಗಬೇಕು. ಸರಾಗವಾಗಿ ನೀರು ಹರಿದು ಹೋಗುವಂತೆ ಚರಂಡಿ ಮತ್ತು ಪೈಪ್ ವ್ಯವಸ್ಥೆಗಳನ್ನು ಮಾಡಬೇಕು. ಬೆಟ್ಟದ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತಡೆಗೋಡೆ ಕಟ್ಟುವ ಸಂದರ್ಭದಲ್ಲಿ ಆಳವಾದ ಮತ್ತು ಗಟ್ಟಿಯಾದ ತಳಪಾಯ ಹಾಕಬೇಕು. ಆಳಕ್ಕೆ ಬೇರು ಬಿಡುವ ಗಿಡ, ಮರಗಳನ್ನು ಬೆಳೆಸಬೇಕು. ಬೆಟ್ಟದ ಮೇಲೆ ಬಿರುಕುಗಳು, ಕಂದಕದಂತಹ ಸ್ಥಳಗಳು ಕಂಡು ಬಂದರೆ ಅವುಗಳ ಮೂಲಕ ನೀರು ಭೂಮಿಯೊಳಗೆ ಸೇರದಂತೆ ಕೂಡಲೇ ಮುಚ್ಚುವ ಕೆಲಸ ಆಗಬೇಕು ಎಂದು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

::: ಮಹಾಮಳೆ :::
ತಲಕಾವೇರಿ ವ್ಯಾಪ್ತಿಯಲ್ಲಿ ಆಗಸ್ಟ್ ತಿಂಗಳಲ್ಲಿ ಮಳೆ ದಿನದಿಂದ ದಿನಕ್ಕೆ ರೌದ್ರಾವತಾರವನ್ನೇ ತಾಳಿರುವುದನ್ನೂ ಕೂಡ ವಿಜ್ಞಾನಿಗಳು ಗುರುತು ಮಾಡಿದ್ದಾರೆ. 2020ರ ಆಗಸ್ಟ್ 3ರಂದು 51.5 ಮಿ.ಮೀ. ಸುರಿದಿದ್ದರೆ, ಆ.4ರಂದು ಮಳೆಯ ಪ್ರಮಾಣ ಏಕಾಏಕಿ 3 ಪಟ್ಟು ಹೆಚ್ಚಾಗಿ 172 ಮಿ.ಮೀ.ಗೆ ಏರಿಕೆಯಾಗಿದೆ. ಆ.5ರಂದು 185 ಮಿ.ಮೀ. ಮಳೆಯಾದರೆ, ಬ್ರಹ್ಮಗಿರಿಯ ಗಜಗಿರಿ ಬೆಟ್ಟ ಕುಸಿತವಾದ ಆ.6ರಂದು ಎಡೆಬಿಡದೇ (“ರೆಡ್ ಅಲರ್ಟ್” ಸಾಮಾನ್ಯ ಮಳೆಗಿಂತ ಶೇ.506 ಹೆಚ್ಚಳ) ಬರೋಬ್ಬರಿ 478 ಮಿ.ಮೀ. ಮಳೆ ಸುರಿದಿದೆ. ಆ.7ರಂದು 388 ಮಿ.ಮೀ., ಆ.8ರಂದು 191 ಮಿ.ಮೀ ಹಾಗೂ ಆ.9ರಂದು 77.5 ಮಿ.ಮೀ. ಮಳೆ ದಾಖಲಾಗಿದೆ. ಭೂ ಕುಸಿತದಲ್ಲಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸುವುದಕ್ಕೆ 3 ದಿನ ಮಳೆಯ ತೀವ್ರತೆಯಿಂದ ಅಡ್ಡಿಯಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

error: Content is protected !!