ಗೃಹರಕ್ಷಕರ ದಿನಾಚರಣೆ : ಪೊಲೀಸರೊಂದಿಗೆ ಗೃಹ ರಕ್ಷಕರ ಕರ್ತವ್ಯ ಶ್ಲಾಘನೀಯ : ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ

14/12/2020

ಮಡಿಕೇರಿ ಡಿ.14 : ಪ್ರಾಕೃತಿ ವಿಕೋಪ, ಸಂಚಾರ ನಿಯಂತ್ರಣ ಮತ್ತಿತರ ತುರ್ತು ಸಂದರ್ಭಗಳಲ್ಲಿ ಪೊಲೀಸರೊಂದಿಗೆ ಬೆನ್ನುಲುಬಾಗಿ ಗೃಹ ರಕ್ಷಕರು ಕರ್ತವ್ಯ ನಿರ್ವಹಿಸುವುದು ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಹೇಳಿದ್ದಾರೆ.
ಕೊಡಗು ಜಿಲ್ಲಾ ಗೃಹರಕ್ಷಕ ದಳ ವತಿಯಿಂದ ನಗರದ ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಗೃಹರಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗೃಹರಕ್ಷಕರು ಯಾವುದೇ ಪ್ರತಿಫಲಾಫೇಕ್ಷೆಯಿಲ್ಲದೆ ಸಾರ್ವಜನಿಕ ಕರ್ತವ್ಯ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಮೆಚ್ಚುವಂತದ್ದು. ವಿವಿಧ ಕಠಿಣ ಪರಿಸ್ಥಿತಿಯಲ್ಲೂ ಗೃಹರಕ್ಷಕರು ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ನುಡಿದರು.
ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಅವರು ಮಾತನಾಡಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಗೃಹ ರಕ್ಷಕರ ಕಾರ್ಯನಿರ್ವಹಣೆ ಮೆಚ್ಚುವಂತದ್ದು, ಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರವಾಸಿ ಮಿತ್ರರಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಹಲವು ಸಂದಿಗ್ಧ ಪರಿಸ್ಥಿತಿಯಲ್ಲೂ ಕರ್ತವ್ಯ ನಿರ್ವಹಿಸುತ್ತಿರುವುದು ಗೃಹರಕ್ಷಕರ ಜಾಣ್ಮೆ ಎಂದು ತಿಳಿಸಿದರು.
ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರು ಹಾಗೂ ಮಡಿಕೇರಿ ತಾಲ್ಲೂಕಿನ ಪೊಲೀಸ್ ಉಪ ಅಧೀಕ್ಷಕರಾದ ಬಿ.ಪಿ.ದಿನೇಶ್ ಕುಮಾರ್ ಅವರು ಮಾತನಾಡಿ ಜಿಲ್ಲೆಯಲ್ಲಿ 9 ಗೃಹ ರಕ್ಷಕ ಘಟಕಗಳಿದ್ದು, 500 ಹೋಂ ಗಾರ್ಡ್ ಹುದ್ದೆಯಲ್ಲಿ 252 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
19 ರಿಂದ 60 ವರ್ಷದೊಳಗಿನವರು ಗೃಹ ರಕ್ಷಕರ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಬಹುದಾಗಿದೆ. ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಹಾಗೂ ಗೃಹ ರಕ್ಷಕ ವಿಭಾಗದಲ್ಲಿ ಸೇವೆ ಸಲ್ಲಿಸಲು ಅಷ್ಟಾಗಿ ಮುಂದೆ ಬರುತ್ತಿಲ್ಲ ಎಂದು ಅವರು ಹೇಳಿದರು.
ಗೃಹರಕ್ಷಕರು ಪೊಲೀಸರೊಂದಿಗೆ ಸರಿಸಮಾನಾಗಿ ಕರ್ತವ್ಯ ನಿರ್ವಹಿಸುವ ಅವಕಾಶವಿದ್ದು, ಇದನ್ನು ಬಳಸಿಕೊಳ್ಳಬೇಕು. ಯಾರಾದರೂ ಇಚ್ಛೆ ಪಟ್ಟಲ್ಲಿ ಕಮಾಂಡೆಂಟ್ ಹುದ್ದೆಗೂ ಬರಬಹುದಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ ಅವರು ಮಾತನಾಡಿ ಕೊಡಗು ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಗೃಹರಕ್ಷಕರು ಟ್ರಾಫಿಕ್ ನಿರ್ವಹಣೆಯಲ್ಲಿ ತುಂಬಾ ಕೆಲಸ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಧ್ವಜ ವಂದನೆ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಡಿವೈಎಸ್‍ಪಿಗಳಾದ ಸಿ.ಟಿ.ಜಯಕುಮಾರ್(ವಿರಾಜಪೇಟೆ), ಎಚ್.ಎಂ.ಶೈಲೇಂದ್ರ (ಸೋಮವಾರಪೇಟೆ), ಪೊಲೀಸ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ, ರಾಮರೆಡ್ಡಿ ಇತರರು ಇದ್ದರು. ಹೋಂ ಗಾರ್ಡ್ ವಿಭಾಗದ ಲಕ್ಷ್ಮಿ ಪ್ರಾರ್ಥಿಸಿದರು. ಫಾರೂಕ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.