ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಮತ್ತು ನೋಟ್ ಪುಸ್ತಕ ವಿತರಣೆ

14/12/2020

ಮಡಿಕೇರಿ ಡಿ.14 : ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇ.ಡಿ ಮತ್ತು ಎಫ್ ಮ್ಯಾನ್ ಕಮಾಡಿಟೀಸ್ ಇಂಡಿಯಾ ಪ್ರೈ.ಲಿ. ವತಿಯಿಂದ ಜಿಲ್ಲೆಯ ಸರ್ಕಾರಿ ಶಾಲೆಯ 800 ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಹಾಗೂ ನೋಟ್ ಪುಸ್ತಕ ಮತ್ತಿತರ ಸಾಮಾಗ್ರಿ ಒಳಗೊಂಡ ಕಿಟ್‍ನ್ನು ವಿತರಿಸಲಾಯಿತು.
ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಸಾಂಕೇತಿಕವಾಗಿ ಕಿಟ್ ವಿತರಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಚ್ಚಾಡೋ ಅವರು ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಂಕಷ್ಟಕ್ಕೆ ತುತ್ತಾಗಿದ್ದರು. ಇದನ್ನು ತಿಳಿದು ಕಂಪನಿಯು ಬಡ ವಿದ್ಯಾರ್ಥಿಗಳಿಗೆ ಸಹಕಾರ ನೀಡುತ್ತಿದೆ ಎಂದು ಅವರು ತಿಳಿಸಿದರು.
ಕಂಪನಿಯ ಛಲಪತಿ ಅವರು ಮಾತನಾಡಿ ಲಾಕ್‍ಡೌನ್ ಸಂದರ್ಭದಲ್ಲಿ 40 ಸಾವಿರ ಮಂದಿಗೆ ಊಟದ ವ್ಯವಸ್ಥೆ, ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರಿಗೆ 1000 ಪಿಪಿಇ ಕಿಟ್ ಹಾಗೂ 1,510 ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.
ಕಂಪನಿಯ ರಮ್ಯಾ ಪ್ರಸಾದ್ ಅವರು ಮಾತನಾಡಿ ಇಡಿ ಮತ್ತು ಎಫ್ ಮ್ಯಾನ್ ಕಂಪಿನಿಯು ಕಾಫಿಗೆ ಸಂಬಂಧಿಸಿದಂತೆ ಉದ್ಯಮ ನಡೆಸುತ್ತಿದ್ದು, ಇದರಿಂದಾಗಿ ಕೊಡಗು ಜಿಲ್ಲೆಗೆ ಏನಾದರೂ ಸಹಕಾರ ನೀಡಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಆಹಾರ ಹಾಗೂ ಅಗತ್ಯ ಸಾಮಗ್ರಿ ಕಿಟ್ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಕಂಪನಿಯು 50 ರಾಷ್ಟ್ರಗಳಲ್ಲಿ ವಿದೇಶಿ ವಿನಿಮಯ ಹೊಂದಿದೆ. ಸಕ್ಕರೆ, ಕಾಫಿ, ಸೇರಿದಂತೆ ವಿವಿಧ ರೀತಿಯ ವ್ಯಾಪಾರ ವಹಿವಾಟು ನಡೆಸುತ್ತಿದೆ ಎಂದು ಅವರು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗುರುರಾಜ್, ಮುಖ್ಯ ಶಿಕ್ಷಕರಾದ ಜನಾರ್ಧನ, ಕಂಪನಿಯ ನವೀನ್ ಕುಮಾರ್ ಇತರರು ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಂಧು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.