ಕೊಡಗು ಪ್ರಾಕೃತಿಕ ವಿಕೋಪ : ಮೂಲಭೂತ ಸೌಲಭ್ಯಕ್ಕೆ 46.82 ಕೋಟಿ ರೂ. ಬಿಡುಗಡೆ

December 14, 2020

ಮಡಿಕೇರಿ ಡಿ.14 : ಮಳೆಗಾಲದಲ್ಲಿ ಸಂಭವಿಸಿದ ಹಾನಿಗೆ ಸಂಬಂಧಿಸಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಎಸ್‍ಡಿಆರ್‍ಎಫ್/ ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ತುರ್ತು ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದ್ದು, ಕೊಡಗು ಜಿಲ್ಲೆಗೆ 46.82 ಕೋಟಿ ರೂ. ಬಿಡುಗಡೆಯಾಗಿದೆ ಎಂದು ವಿರಾಜಪೇಟೆ ಶಾಸಕÀ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೂಲ ಸೌಕರ್ಯಗಳ ತುರ್ತು ದುರಸ್ತಿ ಕಾಮಗಾರಿಗಳಿಗೆ ಯೋಜಿತ ಕಾಮಗಾರಿಗಳ ಅನುಸಾರ ಹಣ ಬಿಡುಗಡೆ ಮಾಡಲಾಗಿದೆ. ಪ್ರವಾಹದಿಂದಾಗಿ ರಸ್ತೆ, ಸೇತುವೆ, ನೀರಾವರಿ ಯೋಜನೆಗಳು, ಕೆರೆಗಳು, ಸರ್ಕಾರಿ ಕಟ್ಟಡಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ, ವಿದ್ಯುತ್ ತಂತಿ, ಟ್ರಾನ್ಸ್‍ಫಾರ್ಮ್‍ಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಮೂಲ ಸೌಕರ್ಯ ಹಾನಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಆದ್ದರಿಂದ ಸರ್ಕಾರ ಮೂಲ ಸೌಕರ್ಯಗಳ ತುರ್ತು ದುರಸ್ತಿಗಾಗಿ ಕೊಡಗು ಜಿಲ್ಲೆಗೆ 46.82 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.
ಅದರಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ 55.39 ಲಕ್ಷ ರೂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 2,926.96 ಲಕ್ಷ ರೂ., ಇಂಧನ ಇಲಾಖೆಗೆ 1,308.88, ಶಿಕ್ಷಣ ಇಲಾಖೆ (ಪ್ರಾಥಮಿಕ ಶಾಲೆ) 206.33 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ(ಅಂಗನವಾಡಿ) 137.14 ಲಕ್ಷ ರೂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 47.65 ಲಕ್ಷ ರೂ. ಒಟ್ಟು 4,682.35 ಲಕ್ಷ ರೂ. ಹಣ ಹಂಚಿಕೆ ಮಾಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

error: Content is protected !!