ದಾಖಲೆಗಳ ಕೊರತೆ : ದಿಡ್ಡಳ್ಳಿ ನಿರಾಶ್ರಿತರ ಮನೆಗಳು ರದ್ದಾಗುವ ಆತಂಕ

December 14, 2020

ಮಡಿಕೇರಿ ಡಿ.14 : ಸೋಮವಾರಪೇಟೆ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಬಸವನಹಳ್ಳಿ ಮತ್ತು ಕೂಡಿಗೆ ಗ್ರಾ.ಪಂ.ಯ ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕೇಂದ್ರಗಳನ್ನು ಕಲ್ಪಿಸಿ ಮೂಲಭೂತ ಸೌಲಭ್ಯವನ್ನು ಒದಗಿಸಲಾಗಿದೆ. ಆದರೆ ಅರ್ಹ ಫಲಾನುಭವಿಗಳು ಒಂದು ವರ್ಷ ಕಳೆದರೂ ಸೂಕ್ತ ದಾಖಲಾತಿಗಳನ್ನು ನೀಡದೆ ಇರುವುದರಿಂದ ಮನೆಗಳು ರದ್ದಾಗುವ ಆತಂಕ ಎದುರಾಗಿದೆ.
ಈ ಪುನರ್ವಸತಿ ಕೇಂದ್ರಗಳ ಪೈಕಿ ಬಸವನಹಳ್ಳಿಯಲ್ಲಿ ರಾಜೀವಗಾಂಧಿ ವಸತಿ ನಿಗಮದಿಂದ ಅನುಮೋದಿತವಾದ ನಿವೇಶನಗಳಲ್ಲಿ 174 ಮನೆಗಳನ್ನು ಹಾಗೂ ಬ್ಯಾಡಗೊಟ್ಟದಲ್ಲಿ 354 ಮನೆಗನ್ನು ನಿರ್ಮಿಸಲಾಗಿದೆ.
ಆದರೆ ಈ ಮನೆಗಳಲ್ಲಿ ರಾಜೀವಗಾಂಧಿ ವಸತಿ ನಿಗಮದಿಂದ ಅನುಮೋದಿತರಾದ ಫಲಾನುಭವಿಗಳು ಸೂಕ್ತ ದಾಖಲಾತಿಗಳನ್ನು ಇಲಾಖೆಗೆ ಸಲ್ಲಿಸಿ ಹಕ್ಕುಪತ್ರಗಳನ್ನು ಪಡೆದು ಸ್ವಾಧೀನಪಡಿಸಿಕೊಳ್ಳಬೇಕಿದೆ.
ಆದರೆ ಈ ಪುನರ್ವಸತಿ ಕೇಂದ್ರಗಳಲ್ಲಿ ಮನೆಗಳನ್ನು ನಿರ್ಮಿಸಿ ಒಂದು ವರ್ಷ ಕಳೆದರೂ ಹಲವು ಮನೆಗಳ ಫಲಾನುಭವಿಗಳು ಸೂಕ್ತ ದಾಖಲಾತಿಗಳನ್ನು ಸಲ್ಲಿಸದೆ ಮನೆಗಳನ್ನು ಸ್ವಾಧೀನಪಡಿಸಿಕೊಳ್ಳದೆ ಖಾಲಿ ಇರುವುದು ಕಂಡು ಬಂದಿದೆ. ಆದ್ದರಿಂದ ಈ ಪುನರ್ವಸತಿ ಕೇಂದ್ರಗಳಲ್ಲಿ ರಾಜೀವ್‍ಗಾಂಧಿ ವಸತಿ ನಿಗಮದಿಂದ ಅನುಮೋದಿತರಾದ ಫಲಾನುಭವಿಗಳು, 15 ದಿನಗಳ ಒಳಗೆ ಸೂಕ್ತ ದಾಖಲಾತಿಗಳನ್ನು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ಇವರ ಕಚೇರಿಗೆ ಸಲ್ಲಿಸಿ ಮನೆಗಳನ್ನು ಸ್ವಾಧೀನಪಡಿಸಿಕೊಳ್ಳುವುದು. ಇಲ್ಲವಾದಲ್ಲಿ ನಿಮಗೆ ಮಂಜೂರಾಗಿರುವ ಮನೆಗಳನ್ನು ರದ್ದುಪಡಿಸಿ ಇಲಾಖೆಯ ಮಾರ್ಗಸೂಚಿಗಳಂತೆ ಅರ್ಹ ವಸತಿ ರಹಿತ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು(ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ 08276-281115 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶೇಖರ್ ಅವರು ತಿಳಿಸಿದ್ದಾರೆ.

error: Content is protected !!