ಅಕ್ರಮ ರಿವಾಲ್ವರ್ ಪ್ರಕರಣ : ಸುಂಟಿಕೊಪ್ಪ ಸಹಕಾರ ಸಂಘದ ಗುಮಾಸ್ತನ ಬಂಧನ

December 14, 2020

ಮಡಿಕೇರಿ ಡಿ.14 : ಅಕ್ರಮವಾಗಿ ರಿವಾಲ್ವರ್ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಂಬಿಬಾಣೆ ಅತ್ತೂರು ನಲ್ಲೂರು ನಿವಾಸಿ, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗುಮಾಸ್ತ, ಶಾಂತರಾಜು (48) ಎಂದು ಗುರುತಿಸಲಾಗಿದೆ.
ಮಡಿಕೇರಿ ನಗರ ಠಾಣಾ ವ್ಯಾಪ್ತಿಯಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಮಡಿಕೇರಿ ನಗರ ಪೊಲೀಸ್ ಠಾಣೆ ಉಪ ನಿರೀಕ್ಷಕರು ಮತ್ತು ಸಿಬ್ಬಂದಿಗಳು ವಶಕ್ಕೆ ಪಡೆದು ವಿಚಾರಿಸಿದಾಗ ಆತನ ಬಳಿ ಒಂದು ರಿವಾಲ್ವರ್ ಪತ್ತೆಯಾಗಿದೆ.
ಆತನ ಬಳಿ ಯಾವುದೇ ದಾಖಲಾತಿಗಳು ಇಲ್ಲದೇ ಇದ್ದುದ್ದರಿಂದ ನಕಲಿ ರಿವಾಲ್ವರನ್ನು ವಶಕ್ಕೆ ಪಡೆದು ಆರೋಪಿಯ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಭಾರತ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು. ವಿಚಾರಣೆ ಸಂದರ್ಭ ನಾಗಭೂಷಣ್ ಎಂಬವರ ವಶದಲ್ಲಿ ಮತ್ತೊಂದು ನಕಲಿ ರಿವಾಲ್ವರ್ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಾಗಭೂಷಣ್ ಮೃತ ಪಟ್ಟಿದ್ದು, ಅವರ ಪತ್ನಿ ಹಾಜರುಪಡಿಸಿದ ಮತ್ತೊಂದು ನಕಲಿ ರಿವಾಲ್ವರನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾಮಿಶ್ರಾ ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಬಿ.ಪಿ.ದಿನೇಶ್ ಕುಮಾರ್ ಅವರ ಮಡಿಕೇರಿ ನಗರ ವೃತ್ತದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ನೇತೃತ್ವದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕಿ ಅಂತಿಮಾ, ಸಹಾಯಕ ಉಪ ನಿರೀಕ್ಷಕ ಹೊನ್ನಪ್ಪ ಕೆ.ಜಿ, ಮಡಿಕೇರಿ ನಗರ ಪೊಲೀಸ್ ಠಾಣಾ ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ಶ್ರೀನಿವಾಸ, ಪ್ರವೀಣ್ ಬಿ.ಕೆ., ನಾಗರಾಜ್ ಕಡಗಣ್ಣವರ, ಅರುಣ್ ಕುಮಾರ್ ಬಿ.ಜಿ.ಅವರನ್ನೊಳಗೊಂಡ ತಂಡವು ಪ್ರಕರಣ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

error: Content is protected !!