ಕುಟ್ಟಂದಿ ಶೂಟಿಂಗ್ ಸ್ಪರ್ಧೆ- ವಿನು ವಿಶ್ವನಾಥ್ ಮತ್ತು ಗೌತಮ್ ಪ್ರಥಮ

December 14, 2020

ಪೊನ್ನಂಪೇಟೆ, ಡಿ.14: ಕಂಡಂಗಾಲದ ಪ್ರಗತಿ ಸ್ವಸಹಾಯ ಸಂಘದ ವತಿಯಿಂದ ಪುತ್ತರಿ ಹಬ್ಬದ ಪ್ರಯುಕ್ತ ಬಿಟ್ಟಂಗಾಲ ಸಮೀಪದ ಕುಟ್ಟಂದಿಯ ಕೆ.ಬಿ. ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಒಟ್ಟು384 ಸ್ಪರ್ಧಿಗಳ ಪೈಕಿ ಆರು ಮಂದಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಒಟ್ಟು ಐದು ಸುತ್ತಿನಲ್ಲಿ ನಡೆದ ‘0.22 ರೈಫಲ್ಸ್’ ವಿಭಾಗದಲ್ಲಿ ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದ ಮಾಯಮುಡಿ ಗ್ರಾಮದ ಸಣ್ಣುವಂಡ ವಿನು ವಿಶ್ವನಾಥ್ ಅವರು ಅದ್ವಿತೀಯ ಸಾಧನೆ ತೋರಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಕೇಚಿರ ಚಮನ್ ಬೆಳ್ಯಪ್ಪ ಅವರು ಈ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದರೆ, ಬಡುವಂಡ ತ್ರಿಶಾಲಿ ತಂಗಮ್ಮ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಒಟ್ಟು 12 ಸುತ್ತಿನಲ್ಲಿ ನಡೆದ ’12ನೇ ಬೋರಿನ ಕೋವಿ’ ವಿಭಾಗದ ಸ್ಪರ್ಧೆಯಲ್ಲಿ ಎಲ್ಲಾ ಸುತ್ತಿನಲ್ಲೂ ಯಶಸ್ವಿಯ ಹೆಜ್ಜೆಯೊಂದಿಗೆ ಗುರಿ ಸಾಧಿಸುತ್ತಾ ಬಂದ ಮೂರ್ನಾಡಿನ ಬಲ್ಲಚಂಡ ಗೌತಮ್ ಅವರು ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರರಾದರು. ಕಿರುಗೂರಿನ ಪೆಮ್ಮಂಡ ಮಧು ವಿಶ್ವನಾಥ್ ಅವರು ಈ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರೆ, ಬಿರುನಾಣಿಯ ಕುಪ್ಪುಡಿರ ಪೊನ್ನು ಮುತ್ತಪ್ಪ ಅವರು ತೃತೀಯ ಸ್ಥಾನದ ವಿಜಯಿಗಳಾಗಿ ಮೂಡಿಬಂದರು.
‘0.22 ರೈಫಲ್ಸ್’ ವಿಭಾಗದಲ್ಲಿ ಒಟ್ಟು 217 ಮತ್ತು ’12ನೇ ಬೋರಿನ ಕೋವಿ’ ವಿಭಾಗದಲ್ಲಿ ಒಟ್ಟು 167 ಸ್ಪರ್ಧಿಗಳು ಪಾಲ್ಗೊಂಡು ವಿಜಯಿಗಳಾಗಲು ಪೈಪೋಟಿ ನೀಡಿದ್ದು ಈ ಸ್ಪರ್ಧೆಯ ವಿಶೇಷತೆಯಾಗಿತ್ತು.
ಕೆ.ಬಿ. ಪ್ರೌಢಶಾಲಾ ಮೈದಾನದ ಆವರಣದಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಟ್ರೋಫಿ ದಾನಿಗಳಾದ ಮೈಸೂರಿನ ಪೊನ್ನೀರ ಚೇತನ್ ಚಂಗಪ್ಪ,  ಕೊಕ್ಕಲೆಮಾಡ ತನು ತಿಮ್ಮಯ್ಯ, ಪೆಮ್ಮಂಡ ವಿಶ್ವನಾಥ್, ತೀತಿಮಾಡ ಜಿ. ಲಿಖಿತ್, ಚೋನಿರ ಸೋಮಣ್ಣ, ಕಂಡಂಗಾಲದ ಪ್ರಮುಖರಾದ ಅಪ್ಪಂಡೇರಂಡ ಭವ್ಯ ಚಿಟ್ಯಣ್ಣ, ಪ್ರಗತಿ ಸ್ವಸಹಾಯ ಸಂಘದ ಹಿರಿಯ ಸದಸ್ಯರಾದ, ನಿವೃತ್ತ ಸೈನಿಕ ಅಪ್ಪಂಡೇರಂಡ ಎನ್. ಪೆಮ್ಮಯ್ಯ ಮೊದಲಾದವರು ವಿಜೇತ ಸ್ಪರ್ಧಿಗಳಿಗೆ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಿದರು.
ಕಂಡಂಗಾಲದ ಪ್ರಗತಿ ಸ್ವಸಹಾಯ ಸಂಘದ ಪದಾಧಿಕಾರಿಗಳಾದ ಅಪ್ಪಂಡೇರಂಡ ದಿನು, ಅಪ್ಪಂಡೇರಂಡ ಬಿ.ಮೋಹನ್, ನಂಬುಡುಮಾಡ ಪವಿ ಪೂವಯ್ಯ, ಚಂದೂರ ಪ್ರಭು, ಅಪ್ಪಂಡೇರಂಡ ಸತಿ, ನಂಬುಡುಮಾಡ ಲವ, ಮುಲ್ಲೆಂಗಡ ಜೀವನ್ ಮತ್ತು ಚಂದೂರ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.
ಕುಟ್ಟಂದಿಯಲ್ಲಿ ನಡೆದ ಗ್ರಾಮೀಣ ಕ್ರೀಡೆಯನ್ನು ವೀಕ್ಷಿಸಲು ಆಸಕ್ತಿಯಿಂದ ಆಗಮಿಸಿದ ಸುತ್ತಮುತ್ತಲಿನ ಗ್ರಾಮಸ್ಥರು ಕೊನೆಕ್ಷಣದವರೆಗೂ ಮೈದಾನದಲ್ಲಿ ಹಾಜರಿದ್ದು, ಸ್ಪರ್ಧೆಗೆ ರಾತ್ರಿ ವರ್ಣರಂಜಿತ ತೆರೆ ಬೀಳುತ್ತಿದ್ದಂತೆ ಅದನ್ನು ಸಾಕ್ಷೀಕರಿಸಿ ನಿರ್ಗಮಿಸಿದರು.

error: Content is protected !!