ಬಸ್ ಸಿಬ್ಬಂದಿಗಳ ಮುಷ್ಕರ ಅಂತ್ಯ

December 15, 2020

ಬೆಂಗಳೂರು ಡಿ.15 : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಿಬ್ಬಂದಿ ಸಂಘಟನೆಗಳು ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡಿದ್ದು, ನೌಕರರು ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಹಲವು ನಾಟಕೀಯ ತಿರುವುಗಳನ್ನು ಪಡೆದ ಸಾರಿಗೆ ಸಂಸ್ಥೆ ಸಿಬ್ಬಂದಿ ಪ್ರಮುಖರ ಮುಷ್ಕರ ಕೊನೆಗೂ ಅಂತ್ಯಗೊಂಡಿದೆ. ಸರ್ಕಾರ ಹಲವು ಸುತ್ತಿನ ಮಾತುಕತೆ ನಂತರ ಅಂತಿಮವಾಗಿ ಮಷ್ಕರ ಕೈಬಿಡಲು ಸಾರಿಗೆ ಸಿಬ್ಬಂದಿ ಸಂಘಟನೆಗಳು ತೀರ್ಮಾನಿಸಿವೆ.
ಕಳೆದ ನಾಲ್ಕು ದಿನಗಳಿಂದ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರು ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಮುಷ್ಕರ ನಡೆಸುತ್ತಿದ್ದರು. ಇಂದು ಸರ್ಕಾರದಿಂದ ಬೇಡಿಕೆಗಳ ಈಡೇರಿಕೆಗೆ ಲಿಖಿತ ರೂಪದಲ್ಲಿ ಭರವಸೆ ದೊರೆತ ಹಿನ್ನೆಲೆಯಲ್ಲಿ ನೌಕರರು ಮುಷ್ಕರವನ್ನು ಹಿಂಪಡೆದಿದ್ದಾರೆ.
ಹತ್ತು ಬೇಡಿಕೆಗಳ ಪೈಕಿ ಒಂಬತ್ತು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಒಪ್ಪಿರುವ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರು ಮುಷ್ಕರವನ್ನು ಹಿಂಪಡೆದಿದ್ದಾರೆಂದು ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸಾರಿಗೆ ಇಲಾಖೆ ಜವಾಬ್ದಾರಿ ಹೊತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ, ಕೋವಿಡ್ ಸೋಂಕಿನಿಂದ ಮೃತಪಟ್ವ ನೌಕರರ ಕುಟುಂಬದವರಿಗೆ 30 ಲಕ್ಷ ರೂಪಾಯಿ ಪರಿಹಾರ, ಅಂತರ್ ನಿಗಮ ವರ್ಗಾವಣೆ, ತರಬೇತಿ ಅವಧಿಯನ್ನು2 ವರ್ಷದಿಂದ 1 ವರ್ಷಕ್ಕೆ ಕಡಿತ ಮಾಡುವುದೂ ಸೇರಿದಂತೆ ಚಾಲಕರಿಗೆ ವಿಶೇಷ ಭತ್ಯೆ, ಮೇಲಾಧಿಕಾರಿಗಳ ಕಿರುಕುಳ ತಡೆ ಸೇರಿದಂತೆ ನೌಕರರ 9 ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದ್ದಾರೆ.

error: Content is protected !!