ವಿಧಾನ ಪರಿಷತ್‍ನಲ್ಲಿ ಇತಿಹಾಸ ಸೃಷ್ಟಿ

December 15, 2020

ಬೆಂಗಳೂರು ಡಿ.15 : ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದ ನಂತರ ಇದೇ ಮೊದಲ ಬಾರಿಗೆ ಕಲಾಪವನ್ನು ಮತ್ತೆ ನಡೆಸುವ ಮೂಲಕ ರಾಜ್ಯ ವಿಧಾನ ಪರಿಷತ್ ಇತಿಹಾಸ ಸೃಷ್ಟಿಸಿದೆ.
ಕಳೆದ ಗುರುವಾರ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು. ಇದೀಗ ಬಿಜೆಪಿ ನಾಯಕರು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿ ನಾಳೆ ಮತ್ತೆ ವಿಧಾನ ಪರಿಷತ್ ಕಲಾಪ ನಡೆಸಬೇಕೆಂದು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧು ಸ್ವಾಮಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ಕಳೆದ ಶುಕ್ರವಾರ ರಾಜ್ಯಪಾಲರಿಗೆ ಪತ್ರ ಬರೆದು ಸಂವಿಧಾನ ವಿಧಿ 170ರಡಿ ಮತ್ತೊಮ್ಮೆ ವಿಧಾನ ಪರಿಷತ್ ಕಲಾಪ ನಡೆಸಲು ಅವಕಾಶ ನೀಡಬೇಕೆಂದು ಕೇಳಿಕೊಂಡೆ. ಅದಕ್ಕೆ ಹಿಂದಿನ ದಿನ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಆದರೆ ಅದು ಸರ್ಕಾರದ ನಿರ್ಧಾರವಾಗಿರಲಿಲ್ಲ. ವ್ಯವಹಾರ ಸಲಹಾ ಸಮಿತಿಯಲ್ಲಿ ಕೂಡ ನಾವು ಒಪ್ಪಿರಲಿಲ್ಲ. ಸಭೆಯ ವೇಳೆ ಪರಿಷತ್ತಿನ ಸಭಾಪತಿಗಳು ಮತ್ತು ಇತರರು, ವಿಧಾನಸಭೆ ಕಲಾಪವನ್ನು ಮುಂದೂಡಿ ಅವರು ಗ್ರಾಮ ಪಂಚಾಯತ್ ಎಲೆಕ್ಷನ್ ಇದೆ ಎಂದು ಊರಿಗೆ ಹೋಗುವುದಾದರೆ ಪರಿಷತ್ತಿನ ಸದಸ್ಯರಿಗೂ ಅವಕಾಶ ನೀಡಬೇಕೆಂದು ಹೇಳಿದರು ಎಂದು ತಿಳಿಸಿದರು.

error: Content is protected !!