ಗೂಗಲ್ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ

15/12/2020

ವಾಷಿಂಗ್ಟನ್ ಡಿ.15 : ಜಗತ್ತಿನಾದ್ಯಂತ ಜಿ-ಮೇಲ್, ಯುಟ್ಯೂಬ್ ಸೇರಿದಂತೆ ಗೂಗಲ್ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ.
ಜಗತ್ತಿನಾದ್ಯಂತ ಗೂಗಲ್‍ನ ಬಹುತೇಕ ಸೇವೆಗಳಲ್ಲಿ ಅಡಚಣೆ ಎದುರಾಗಿದ್ದು, ಜಿಮೇಲ್, ಯುಟ್ಯೂಬ್, ಮ್ಯಾಪ್ಸ್ ಹಾಗೂ ಡ್ರೈವ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಸಂಜೆ 5 ಗಂಟೆಯಿಂದ ಗೂಗಲ್‍ನ ಸೇವೆಗಳಲ್ಲಿ ವ್ಯತ್ಯಯ ಕಂಡುಬಂದಿದ್ದು, ಬಹುತೇಕ ಬಳಕೆದಾರರಿಗೆ ಜಿಮೇಲ್ ಮತ್ತು ಯುಟ್ಯೂಬ್ ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ಯುಟ್ಯೂಬ್ ತೆರೆಯಲು ಪ್ರಯತ್ನಿಸಿದರೆ, ‘ಏನೋ ಸಮಸ್ಯೆಯಾಗಿದೆ’ ಎಂಬ ಸಂದೇಶ ತೋರುತ್ತಿತ್ತು. ಜಿಮೇಲ್ ತಾತ್ಕಾಲಿಕವಾಗಿ ವ್ಯತ್ಯಯವೆಂದು ಪರದೆ ಮೇಲೆ ಸಂದೇಶ ಬರುತ್ತಿತ್ತು.
ಭಾರತವೂ ಸೇರಿದಂತೆ ಜಪಾನ್, ಯುರೋಪ್ ಹಾಗೂ ಅಮೆರಿಕದ ಕೆಲವು ಭಾಗಗಳಲ್ಲಿ ಗೂಗಲ್ ಸೇವೆಗಳಿಗೆ ಅಡಚಣೆಯಾಗಿದೆ ಎಂದು ತಿಳಿದು ಬಂದಿದೆ.