ಸಂತ ಮೈಕಲರ ಶಾಲಾ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಆಹಾರ ಧಾನ್ಯಗಳ ವಿತರಣೆ

December 15, 2020

ಮಡಿಕೇರಿ ಡಿ. 15 : ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸಂತ ಮೈಕಲರ ಶಾಲಾ ಆವರಣದಲ್ಲಿ ಅಕ್ಷರ ದಾಸೋಹದ ಉಚಿತ ಆಹಾರ ಧಾನ್ಯಗಳ ವಿತರಣೆ ಕಾರ್ಯಕ್ರಮ ನಡೆಯಿತು.
ಶಾಲಾ ವಿದ್ಯಾರ್ಥಿಗಳಿಗೆ ತರಗತಿಗಳು ಆನ್ಲೈನ್ ಮುಖಾಂತರ ನಡೆಯುತ್ತಿರುವುದರಿಂದ ಅಕ್ಷರ ದಾಸೋಹದ ಗೋದಾಮಿನಲ್ಲಿ ದಾಸ್ತಾನಿದ್ದ ಜೂನ್ ಜುಲೈ ತಿಂಗಳ 53 ದಿನಗಳ ಆಹಾರ ಪದಾರ್ಥಗಳನ್ನು ಪ್ರತಿ ವಿದ್ಯಾರ್ಥಿಗಳಿಗೆ ಇಂತಿಷ್ಟು ಎನ್ನುವ ಅನುಪಾತದಲ್ಲಿ ಹಂಚಿಕೆ ಮಾಡಲಾಯಿತು.
ಆಹಾರ ಧಾನ್ಯಗಳನ್ನು ವಿತರಿಸಿ ನಂತರ ಮಾತನಾಡಿದ ಅಕ್ಷರ ದಾಸೋಹ ಅಧಿಕಾರಿ ಮೋಹನ್, ವಿದ್ಯಾರ್ಥಿಗಳಿಗೆ ಶಾಲೆ ಇನ್ನೂ ತೆರೆಯದೆ ಇರುವುದರಿಂದ ಪ್ರತಿ ವಿದ್ಯಾರ್ಥಿಗೆ ಸಲ್ಲಬೇಕಾದ ಪೌಷ್ಟಿಕಯುಕ್ತ ಆಹಾರವನ್ನು ಅವರ ಪಾಲಕರಿಗೆ ವಿತರಿಸಲಾಗುತ್ತಿದೆ ಎಂದರು.
ಸಿಸ್ಟರ್ ಪ್ರತಿಮಾ ಮಾತನಾಡಿ ಸರಕಾರದ ಸವಲತ್ತುಗಳು ಪ್ರತಿ ಮಕ್ಕಳಿಗೂ ಸಿಗಬೇಕೆನ್ನುವ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು.
ಕೊರೋನಾ ಸೋಂಕಿನ ಕುರಿತು ಮುನ್ನೆಚ್ಚರಿಕೆ ವಹಿಸಿ ಸಾಮಾಜಿಕ ಅಂತರ ಹಾಗು ಮಾಸ್ಕ್‍ನ ನಿಯಮಗಳನ್ನು ಕಾಯ್ದುಕೊಂಡು ಧಾನ್ಯಗಳನ್ನು ವಿತರಿಸಲಾಯಿತು.
ಈ ಕಾರ್ಯದಲ್ಲಿ ವಿದ್ಯಾಸಂಸ್ಥೆಯ ಶಿಕ್ಷಕರು ಹಾಗೂ ಉದ್ಯೋಗಿಗಳು ಇದ್ದರು.

error: Content is protected !!