ಅರೆಭಾಷೆ ದಿನಾಚರಣೆ : ಅರೆಭಾಷೆಯ ಬಗ್ಗೆ ಅಭಿಮಾನ ಇರಲಿ; ಮಾತನಾಡಲು ಹಿಂಜರಿಕೆ ಬೇಡ : ಬಾರಿಯಂಡ ಜೋಯಪ್ಪ

15/12/2020

ಮಡಿಕೇರಿ ಡಿ.15 : ಮಾತೃ ಭಾಷೆಯು ಆಕರ್ಷಣೀಯ ಮತ್ತು ಕಾಂತೀಯ ಗುಣ ಹೊಂದಿದ್ದು, ಆ ನಿಟ್ಟಿನಲ್ಲಿ ಅರೆಭಾಷೆಯ ಬಗ್ಗೆ ಅಭಿಮಾನ ಇರಬೇಕು. ಜೊತೆಗೆ ಮಾತನಾಡಲು ಹಿಂಜರಿಯಬಾರದು ಎಂದು ವಿಶ್ರಾಂತ ಪ್ರಾಂಶುಪಾಲರಾದ ಬಾರಿಯಂಡ ಜೋಯಪ್ಪ ಅವರು ತಿಳಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ಮಂಗಳವಾರ ನಡೆದ ‘ಅರೆಭಾಷೆ ದಿನಾಚರಣೆ ಮತ್ತು ಅರೆಭಾಷೆ ಯಕ್ಷಗಾನ ತಾಳಮದ್ದಳೆ ಕೂಟ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅವರವರ ಮಾತೃ ಭಾಷೆಯಲ್ಲಿ ಮಾತನಾಡಿದಾಗ ತಿರುಗಿ ನೋಡುವಂತಾಗುತ್ತದೆ. ಆದ್ದರಿಂದ ಮಾತೃಭಾಷೆ ಬಗ್ಗೆ ಕೀಳರಿಮೆ ಬೇಡ. ಅರೆಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಅವರು ಸಲಹೆ ಮಾಡಿದರು.
ಸಣ್ಣ ಸಣ್ಣ ಸಮೂಹ ಭಾಷೆಗಳು ನಾಶವಾದರೆ ಸಂಸ್ಕøತಿಯು ನಾಶವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮಾತೃ ಭಾಷೆ ಮಾತನಾಡಬೇಕು. ಉನ್ನತ ಶಿಕ್ಷಣ ಪಡೆದು ಉದ್ಯೋಗ ಪಡೆದವರು ಮಾತೃ ಭಾಷೆಯಾದ ಅರೆಭಾಷೆಯನ್ನು ಉಳಿಸಬೇಕು ಎಂದು ಬಾರಿಯಂಡ ಜೋಯಪ್ಪ ಅವರು ನುಡಿದರು.
ಅರೆಭಾಷೆ ಬೆಳವಣಿಗೆಗೆ ಹಿರಿಯರಾದ ಟಿ.ಜಿ.ಮುಡೂರು, ಎಂ.ಜಿ.ಕಾವೇರಮ್ಮ, ಪ್ರೊ.ಕೋಡಿ ಕುಶಾಲಪ್ಪ ಗೌಡ, ಡಾ.ಕಾವೇರಿ ಮನೆ ಬೋಜಪ್ಪ, ಕಟ್ರತನ ಬೆಳ್ಯಪ್ಪ ಪ್ರಮುಖರಾಗಿದ್ದಾರೆ. ಹಾಗೆಯೇ ಬಾಚರಣಿಯಂಡ ಅಪ್ಪಣ್ಣ, ಎಂ.ಇ.ಮಹಮ್ಮದ್, ಕೆ.ಟಿ.ಬೇಬಿ ಮ್ಯಾಥ್ಯೂ, ಕಟ್ಟಿ ಚಂಗಪ್ಪ, ನಾಗೇಶ್ ಕಾಲೂರು, ಸುಬ್ರಾಯ ಸಂಪಾಜೆ, ಏಸುಪ್ರಿಯಾ ಇಂದಿರಾ ಗಜರಾಜ್, ಜಬ್ಬಾರ್ ಸಮೊ ಪ್ರಮುಖರು ಅರೆಭಾಷೆ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ದೇಶದಲ್ಲಿ 780 ಕ್ಕೂ ಹೆಚ್ಚು ಭಾಷೆಗಳಿದ್ದು, 400 ರಷ್ಟು ಭಾಷೆಗಳು ಅಳಿವಿನ ಅಂಚಿನಲ್ಲಿವೆ ಎಂದು ಭಾಷಾ ಶಾಸ್ತ್ರಜ್ಞರಾದ ಗಣೇಶ್ ಎನ್.ದೇವಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಡಿಸೆಂಬರ್, 11 ಅರೆಭಾಷೆ ಅಕಾಡೆಮಿ ಸ್ಥಾಪಿಸಿದ್ದ ದಿನವಾಗಿದ್ದು, ಆ ದಿಸೆಯಲ್ಲಿ ಅರೆಭಾಷೆ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಕಾಡೆಮಿ ಸ್ಥಾಪನೆಗೆ ಹಲವರು ಶ್ರಮಿಸಿದ್ದಾರೆ ಎಂದರು.
ದಕ್ಷಿಣ ಕನ್ನಡದಲ್ಲಿ ತುಳು ಭಾಷೆಗೆ ತನ್ನದೇ ಆದ ಸ್ಥಾನವಿದೆ. ತುಳು ಭಾಷೆಯಲ್ಲಿ ಪಠ್ಯ ಪುಸ್ತಕವು ಬಂದಿದೆ. ಕಳೆದ 25-30 ವರ್ಷಗಳಲ್ಲಿ ಗಮನಾರ್ಹ ಸ್ಥಾನವನ್ನು ತುಳು ಭಾಷೆ ಪಡೆದುಕೊಂಡಿದೆ. ಅದೇ ರೀತಿ ಅರೆಭಾಷೆಯನ್ನು ಸಹ ಯಕ್ಷಗಾನ, ಕಥೆ, ನಾಟಕ ಕಾದಂಬರಿ, ಪ್ರಬಂಧ ಮೂಲಕ ಭಾಷೆಯನ್ನು ಎತ್ತರಕ್ಕೆ ಕೊಂಡೊಯ್ಯಬೇಕು. ಜೊತೆಗೆ ಐಎಸ್‍ಒ ಮಾನ್ಯತೆ ಪಡೆಯಲು ಶ್ರಮಿಸಬೇಕಿದೆ. ಆ ನಿಟ್ಟಿನಲ್ಲಿ ಸೃಜನಶೀಲ ಚಟುವಟಿಕೆ ಕೈಗೊಳ್ಳಬೇಕಿದೆ ಎಂದು ಅಕಾಡೆಮಿ ಅಧ್ಯಕ್ಷರು ನುಡಿದರು.
ಅರೆಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆಗೆ ತುಂಬಾ ಅವಕಾಶವಿದ್ದು, ಮುಂದಿನ ವರ್ಷದಲ್ಲಿ ಅರೆಭಾಷೆ ಅಕಾಡೆಮಿಗೆ ದಶಮಾನೋತ್ಸವ ಸಂದರ್ಭದಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷರು ಪ್ರಕಟಿಸಿದರು.
ಅರೆಭಾಷೆ ದಿನಾಚರಣೆಯು ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು ಸೇರಿದಂತೆ ಇತರೆ ಕಡೆಗಳಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಅವರು ಮಾತನಾಡಿ ಅರೆಭಾಷೆ ದಿನಾಚರಣೆಯನ್ನು ಚರಿತ್ರೆಯಲ್ಲಿ ದಾಖಲು ಮಾಡಬೇಕು. ಕೊಡಗು ಗೌಡ ಸಮಾಜಗಳ ಒಕ್ಕೂಟಗಳ ವತಿಯಿಂದ ಜಿಲ್ಲೆಯಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕೊಡಗು ಗೌಡ ಮಹಿಳಾ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ರಾಧ ಯಾದವ ಅವರು ಮಾತನಾಡಿ ಅರೆಭಾಷೆಯನ್ನು ಮಕ್ಕಳಿಗೆ ಕಲಿಸಬೇಕು. ತಾಳಮದ್ದಳೆ, ಯಕ್ಷಗಾನವನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು. ಮಕ್ಕಳು ಓದಿನ ಜೊತೆಗೆ ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷರಾದ ಪೈಕೇರ ಮನೋಹರ ಮಾದಪ್ಪ ಅವರು ಮಾತನಾಡಿ ಅರೆಭಾಷೆ, ಸಾಹಿತ್ಯ ಮತ್ತು ಸಂಸ್ಕøತಿ ಎಲ್ಲೆಡೆಯು ಫಸರಿಸುವಂತಾಗಲಿ ಎಂದು ಆಶಿಸಿದರು.
ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ದಂಬೆಕೋಡಿ ಎಸ್.ಆನಂದ್, ಡಾ.ಕೆ.ಸಿ.ದಯಾನಂದ, ಎ.ಟಿ.ಕುಸಮಾಧರ, ಪುರುಷೋತ್ತಮ ಕಿರ್ಲಾಯ ಇತರರು ಇದ್ದರು.
ರಿಜಿಸ್ಟ್ರಾರ್ ಚಿನ್ನಸ್ವಾಮಿ ಸ್ವಾಗತಿಸಿದರು. ಬೈತಡ್ಕ ಜಾನಕಿ ಪ್ರಾರ್ಥಿಸಿದರು. ಸದಸ್ಯರಾದ ಧನಂಜಯ ಅಗೋಳಿಕಜೆ ನಿರೂಪಿಸಿದರು. ಕೆ.ಸಿ.ದಯಾನಂದ ವಂದಿಸಿದರು.
ಗಮನ ಸೆಳೆದ ಅರೆಭಾಷೆ ಯಕ್ಷಗಾನ ತಾಳಮದ್ದಳೆ: ಕರ್ನಾಟಕ ಅರೆಭಾಷೆ, ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿ ವತಿಯಿಂದ ಅರೆಭಾಷೆ ದಿನಾಚರಣೆ ಪ್ರಯುಕ್ತ ಅರೆಭಾಷೆ ಯಕ್ಷಗಾನ ತಾಳಮದ್ದಳೆ ‘ಪಂಚವಟಿ ಪ್ರಸಂಗ’ ಗಮನ ಸೆಳೆಯಿತು.
ಸುಬ್ರಾಯ ಸಂಪಾಜೆ, ಭವ್ಯಶ್ರೀ ಕುಲ್ಕುಂದ(ಭಾಗವತರು), ಚಂದ್ರಶೇಖರ ಗುರುವಾಯನಕೆರೆ (ಚೆಂಡೆ), ಅಕ್ಷಯರಾವ್ ವಿಟ್ಲ(ಮದ್ದಲೆ), ಮುರಾರಿ ಭಟ್ ಪಂಜಿಗದ್ದೆ (ಚಕ್ರತಾಳ) ಇವರು ಹಿಮ್ಮೇಳ ನಡೆಸಿಕೊಟ್ಟರು. ಜಯಾನಂದ ಸಂಪಾಜೆ(ಶ್ರೀರಾಮ), ಕೊಳ್ತಿಗೆ ನಾರಾಯಣಗೌಡ(ಲಕ್ಷ್ಮಣ), ರವಿಚಂದ್ರ ಚೆಂಬು(ಸೀತೆ), ಕುಸುಮಾಧರ ಎ.ಟಿ(ಋಷಿಗ), ಜಬ್ಬಾರ್ ಸಮೊ ಸಂಪಾಜೆ(ಸೂರ್ಪನಖಿ) ಅವರು ಅರ್ಥಗಾರಿಕೆ ನುಡಿದರು.