ರಾಜಕೀಯ ಪಕ್ಷಗಳ ಸಭೆ, ಸಮಾರಂಭದಲ್ಲಿ ಪಕ್ಷದ ಬಾವುಟ, ಬ್ಯಾನರ್ ಬಳಸುವಂತಿಲ್ಲ

15/12/2020

ಮಡಿಕೇರಿ ಡಿ.15 : ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯು ಪಕ್ಷರಹಿತ ಚುನಾವಣೆಯಾಗಿದೆ. ರಾಜಕೀಯ ಪಕ್ಷಗಳು ಈ ಚುನಾಣೆಯಲ್ಲಿಯೂ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವ, ಸಭೆ ಸಮಾರಂಭ ನಡೆಸುವ ರಾಜಕೀಯ ಮುಖಂಡರುಗಳ ಭಾವಚಿತ್ರಗಳನ್ನು ಕರ ಪತ್ರಗಳನ್ನು ಮುದ್ರಿಸಿ ಪಕ್ಷಗಳ ಬಾವುಟ ಮತ್ತು ಚಿಹ್ನೆ ಬಳಸಿಕೊಂಡು ಪ್ರಚಾರ ಮಾಡುವ ಸಂಭವ ಇದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 7(2)ರಂತೆ ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ಪಕ್ಷದ ಆಧಾರ ರಹಿತವಾಗಿ ನಡೆಸುವುದರಿಂದ ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತದೆ.
ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳಿಗೆ ಹಾಗೂ ಸ್ಪರ್ಧಾಳುಗಳಿಗೆ ಕಾನೂನು ಉಲ್ಲಂಘನೆಯಾಗದಂತೆ ಕ್ರಮವಹಿಸುವಂತೆ ಕೋರಿದೆ.
ರಾಜಕೀಯ ಪಕ್ಷಗಳು ಸಭೆ, ಸಮಾರಂಭಗಳನ್ನು ಏರ್ಪಡಿಸಿ ವೇದಿಕೆಯ ಮೇಲೆ ಪಕ್ಷದ ಬಾವುಟ, ಬ್ಯಾನರ್‍ಗಳನ್ನು ಬಳಸುವಂತಿಲ್ಲ. ಸ್ಪರ್ಧಿಸುವ ಅಭ್ಯರ್ಥಿಗಳನ್ನು ತಮ್ಮ ಪಕ್ಷದ/ ಬೆಂಬಲಿತ ಅಭ್ಯರ್ಥಿ ಎಂದು ಪರಿಚಯಿಸುವುದು ಹಾಗೂ ಅವರ ಪರವಾಗಿ ಮತ ನೀಡಲು ಮತದಾರರನ್ನು ಕೋರುವಂತಿಲ್ಲ.
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ರಾಜಕೀಯ ಮುಖಂಡರ ಭಾವಚಿತ್ರ/ ಪಕ್ಷದ ಚಿಹ್ನೆ ಇರುವ ಕರಪತ್ರಗಳನ್ನು ಮುದ್ರಿಸುವುದು/ ಹಂಚುವುದು ಮಾಡುವಂತಿಲ್ಲ. ರಾಜಕೀಯ ಮುಖಂಡರ ಭಾವಚಿತ್ರ ರಾಜಕೀಯ ಪಕ್ಷಗಳ ಚಿಹ್ನೆ ಇರುವ ಕರಪತ್ರಗಳು, ಕಟೌಟ್‍ಗಳು, ಬ್ಯಾನರ್ ಮತ್ತು ಬಂಟಿಂಗ್‍ಗಳ ಮೂಲಕ ಪ್ರಚಾರ ಮಾಡುವಂತಿಲ್ಲ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಟಿ.ವಿ.ಮಾಧ್ಯಮಗಳು, ಪತ್ರಿಕೆಗಳ ಮೂಲಕ ರಾಜಕೀಯ ಮುಖಂಡರ ಭಾವಚಿತ್ರ ಮತ್ತು ಪಕ್ಷಗಳ ಚಿಹ್ನೆಗಳನ್ನು ಬಳಸಿ ಜಾಹೀರಾತು ನೀಡುವಂತಿಲ್ಲ.
ಇಂತಹ ಪ್ರಕರಣಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಉಲ್ಲಂಘನೆಯಾಗುವುದು ಕಂಡುಬಂದಲ್ಲಿ ಅಂತಹ ಚುನಾವಣೆ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.