ದಾಳಿಂಬೆ ಹಣ್ಣಿನಲ್ಲಿರುವ ಅದ್ಭುತ ಪ್ರಯೋಜನಗಳು

December 16, 2020

ಇದರ ಹಣ್ಣು ರುಚಿಕರವಾಗಿದ್ದು,ತಿನ್ನಲು ಹಾಗೂ ಪಾನೀಯ ತಯಾರಿಸಲು ಉಪಯೋಗಿಸುತ್ತಾರೆ. ಹಣ್ಣಿನ ಸಿಪ್ಪೆ,ತೊಗಟೆ,ಬೀಜ ಹಾಗೂ ಎಲೆಗಳು ಔಷಧಿಗಳಲ್ಲಿ ಬಳಸಲ್ಪಡುತ್ತವೆ. ದಾರುವು ಸಣ್ಣ ಕಣರಜನೆ ಹೊಂದಿದ್ದು,ಕೈ ಬೆತ್ತ,ಉಪಕರಣಗಳ ಹಿಡಿ ಇತ್ಯಾದಿಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.

ಸಾಂಪ್ರದಾಯಿಕ ಔಷಧದಲ್ಲಿ
ಭಾರತದ ಪ್ರಾಚೀನ ಆಯುರ್ವೇದ ಸಾಂಪ್ರದಾಯಿಕ ಔಷಧಿ ವ್ಯವಸ್ಥೆಯಲ್ಲಿ, ದಾಳಿಂಬೆ ಆಗಾಗ್ಗೆ ಔಷಧಿಗಳಲ್ಲಿ ಒಂದು ಘಟಕಾಂಶವಾಗಿದೆ ಎಂದು ವಿವರಿಸಲಾಗುತ್ತದೆ.

ಉಪಯೋಗಗಳು : ಹೂ ಮತ್ತು ಚಿಗುರಿನ ಕಷಾಯ ರಕ್ತಭೇದಿಗೆ ಒಳ್ಳೆಯದು.
ಬೇರಿನ ಚಕ್ಕೆಯ ಕಷಾಯದಿಂದ ಲಾಡಿ ಹುಳುವಿನ ಸಮಸ್ಯೆ ನಿವಾರಣೆ ಆಗುತ್ತದೆ.
ಬೇರನ್ನು ಅರೆದು ಹಣೆಗೆ ಲೇಪಿಸಿದರೆ ಉಷ್ಣದ ತಲೆನೋವು ವಾಸಿಯಾಗುತ್ತದೆ.
ಮೊಗ್ಗುಗಳನ್ನು ಒಣಗಿಸಿ ದಿನಕ್ಕೆ ಎರಡು ಹೊತ್ತು ಗುಲಗಂಜಿಯಷ್ಟು ಸೇವಿಸುವುದು ಕೆಮ್ಮು ಗುಣವಾಗುವುದಕ್ಕೆ ಸಹಕಾರಿಯಾಗಿದೆ.
ಚಿಗುರಿನ ಎಲೆಯ ಕಷಾಯವನ್ನು ನಿಯಮಿತವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಗ್ಯಾಸ್ಟ್ರಿಕ್‍ಟ್ರಬಲ್ ನಿವಾರಣೆಯಾಗುವುದು.
ಚಿಗುರು ಎಲೆಗಳ ಕಷಾಯವನ್ನು ಮುಕ್ಕಳಿಸುವುದರಿಂದ ಬಾಯಿಹುಣ್ಣು ಗುಣವಾಗುವುದು.

ವೃದ್ಧಾಪ್ಯವನ್ನು ದೂರವಿಡುತ್ತದೆ : ದಾಳಿಂಬೆಯಲ್ಲಿರುವ ಹಲವು ಆಂಟಿ ಆಕ್ಸಿಡೆಂಟುಗಳು ಶಾರೀರಿಕ ಆರೋಗ್ಯದ ಜೊತೆಗೆ ಚರ್ಮದ ಕಾಂತಿಯನ್ನೂ ಹೆಚ್ಚಿಸುವ ಕಾರಣ ವೃದ್ಧಾಪ್ಯದ ಚಿಹ್ನೆಗಳು ಬೇಗನೇ ಆವರಿಸದು. ನಮ್ಮ ಚರ್ಮ ಕೊಲಾಜೆನ್ ಮತ್ತು ಎಲಾಸ್ಟಿಕ್ ನಾರುಗಳಿಂದ ಮಾಡಲ್ಪಟ್ಟಿದೆ (collagen and elastic fibres)ಈ ಕೊಲಾಜೆನ್ ಸುಸ್ಥಿತಿಯಲ್ಲಿಡಲು ವಿಟಮಿನ್ ಸಿ ಅಗತ್ಯ. ದಾಳಿಂಬೆಯಲ್ಲಿ ಸಮಪ್ರಮಾಣದಲ್ಲಿರುವ ವಿಟಮಿನ್ ಸಿ ಚರ್ಮದ ಆರೈಕೆ ಮತ್ತು ರಕ್ಷಣೆಗೆ ಕಾರಣವಾಗಿದೆ.

ನರಗಳ ಒಳಗೆ ಶೇಖರವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುತ್ತದೆ : ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL-low density lipids) ಶೇಖರಣೆ ಹೆಚ್ಚುತ್ತಿದ್ದಂತೆ ನರಗಳು ತಿರುವಿದೆಡೆಯಲ್ಲಿ, ಕವಲಿನ ನಡುವಣ ಭಾಗದಲ್ಲಿ ಶೇಖರಗೊಂಡು ರಕ್ತದ ಮೂಲಕ ಬಳಿಕ ಆಗಮನವಾಗುವ ಕೊಲೆಸ್ಟ್ರಾಲ್ ಅನ್ನು ಅಂಟಿಸಿಕೊಂಡು ನರಗಳ ಒಳಭಾಗವನ್ನು ಒತ್ತುತ್ತಾ ಬರುತ್ತದೆ. ಪರಿಣಾಮವಾಗಿ ಹೃದಯಕ್ಕೆ ಈ ಭಾಗದಿಂದ ರಕ್ತವನ್ನು ಸರಬರಾಜು ಮಾಡಲು ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ. ನೈಸರ್ಗಿಕವಾಗಿ ಸಿಗುವ ಆಂಟಿ ಆಕ್ಸಿಡೆಂಟುಗಳು ಈ ಗಂಟುಗಳನ್ನು ಕರಗಿಸಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಅಲ್ಲಿಂದ ತೊಲಗಿಸಲು ಸಹಾಯ ಮಾಡುತ್ತದೆ. ಹಸಿರು ಚಹಾದಲ್ಲಿ (ಗ್ರೀನ್ ಟೀ) ಆಂಟಿ ಆಕ್ಸಿಡೆಂಟುಗಳು ಹೇರಳವಾಗಿದ್ದರೂ ದಾಳಿಂಬೆಯಲ್ಲಿ ಇನ್ನೂ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳಿವೆ. ತಾಜಾ ದಾಳಿಂಬೆ ಹಣ್ಣುಗಳನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ದೂರವಾಗಿ ಆರೋಗ್ಯ ವೃದ್ಧಿಸುತ್ತದೆ.

ಸುಲಭಗೊಳ್ಳುವ ವಿಸರ್ಜನೆ : ದಾಳಿಂಬೆ ಹಣ್ಣಿನಲ್ಲಿ ಸುಲಭವಾಗಿ ಕರಗದ ನಾರಿನಂಶವಿರುವ ಕಾರಣ ಕರುಳಿನಲ್ಲಿ ಪಚನಕ್ರಿಯೆಯ ನಂತರ ತ್ಯಾಜ್ಯಗಳೊಂದಿಗೆ ಸುಲಭವಾಗಿ ಮಿಳಿತಗೊಂಡು ಸುಖವಿಸರ್ಜನೆಗೆ ಸಹಾಯ ಮಾಡುತ್ತದೆ. ಈ ನಾರು ದಾಳಿಂಬೆ ಕಾಳಿನ ಒಳಗಿನ ಬೀಜದಲ್ಲಿ ಶೇಖರವಾಗಿದ್ದು ಪ್ರತಿದಿನದ ಬಹಿರ್ದೆಶೆಗೆ ನೆರವಾಗುತ್ತದೆ.

ಉತ್ತಮಗೊಳ್ಳುವ ರೋಗನಿರೋಧಕ ಶಕ್ತಿ : ವಿಟಮಿನ್ ಸಿ ನ ಇನ್ನೊಂದು ಉಪಯೋಗವೆಂದರೆ ರೋಗ ನಿರೋಧಕ ಶಕ್ತಿಯನ್ನು ಉತ್ತಮಪಡಿಸುವುದು. ಮಳೆಗಾಲದಲ್ಲಿ ಗಾಳಿ, ನೀರಿನ ಮೂಲಕ ದೇಹಕ್ಕೆ ಧಾಳಿಯಿಡುವ ಹಲವು ಕ್ರಿಮಿಗಳನ್ನು ಎದುರಿಸಲು ದೇಹವನ್ನು ಸದೃಢಗೊಳಿಸಲು ದಾಳಿಂಬೆಯಲ್ಲಿ ಹೇರಳವಾಗಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ನೆರವಾಗುತ್ತವೆ.

ಪಿತ್ತಜನಕಾಂಗದ ಬೆಳವಣಿಗೆಗೆ ಸಹಾಯ : ನಮ್ಮ ದೇಹದಲ್ಲಿನ ಅಂಗಗಳಲ್ಲಿ ಒಂದು ಭಾಗ ದಾನ ಮಾಡಿದ ಬಳಿಕ ಮತ್ತೆ ಬೆಳೆಯುವ ಅಂಗವೆಂದರೆ ಪಿತ್ತಜನಕಾಂಗ ಮಾತ್ರ. ಈ ಬೆಳವಣಿಗೆಗೆ glutathione ಎಂಬ ಕಿಣ್ವ ಅಗತ್ಯ. ದಾಳಿಂಬೆಯಲ್ಲಿರುವ ellagic ಎಂಬ ಅಂಶ glutathione ಕಿಣ್ವವನ್ನು ಹೆಚ್ಚು ಹೆಚ್ಚಾಗಿ ದೇಹ ಉತ್ಪಾದಿಸಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಪಿತ್ತಜನಕಾಂಗ ಶೀಘ್ರವೇ ತನ್ನ ಮೂಲಸ್ವರೂಪ ಪಡೆಯುತ್ತದೆ. ಹೆಚ್ಚಾಗಿ ಮದ್ಯಪಾನಿಗಳಲ್ಲಿ ಪಿತ್ತಜನಕಾಂಗ ಬಾಧೆಗೊಳಗಾಗಿದ್ದು ದಾಳಿಂಬೆಯ ಸೇವನೆ ಪರಿಣಾಮಕಾರಿಯಾಗಿದೆ.

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ : ದಾಳಿಂಬೆಯಲ್ಲಿರುವ polyphenols, anthocyanins ಮತ್ತು tannins ಎಂಬ ಕಿಣ್ವಗಳು ಮೂತ್ರಪಿಂಡಗಳ ಕೆಲಸಕ್ಕೆ ನೆರವಾಗುತ್ತವೆ. ಪರಿಣಾಮವಾಗಿ ರಕ್ತ ಪರಿಶುದ್ಧಗೊಂಡು ದೇಹದ ವಿಷಕಾರಕ ವಸ್ತುಗಳು ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ.

error: Content is protected !!