ಪೊನ್ನಂಪೇಟೆಯಲ್ಲಿ ರಕ್ತದಾನ ಶಿಬಿರ : ರಕ್ತದಾನ ಮಾಡಿ ಜೀವ ಉಳಿಸಿ : ಶ್ರೀ ಬೋದಸ್ವರೂಪಾನಂದ ಮಹರಾಜ್ ಕರೆ

December 16, 2020

ಮಡಿಕೇರಿ ಡಿ. 16 : ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ ಬೇರೆ ಯಾವುದೇ ದಾನದಿಂದ ಮನುಷ್ಯನ ಜೀವ ಉಳಿಸಲು ಸಾಧ್ಯವಿಲ್ಲ, ನೀವು ನೀಡುವ ರಕ್ತ ಹಲವರ ಜೀವ ರಕ್ಷಣೆ ಮಾಡಬಹುದು ಎಂದು ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿಬೋದಸ್ವರೂಪಾನಂದ ಮಹರಾಜ್ ನುಡಿದರು.
ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಆಸ್ಪತ್ರೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಆಶ್ರಯ ಹಸ್ತ ಟ್ರಸ್ಟ್ ಸರಗೂರು, ಕೊಡಗು ಜಿಲ್ಲಾ ರಕ್ತನಿಧಿ ಕೇಂದ್ರ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಡಗು ಪತ್ರಿಕಾ ಭವನ ಟ್ರಸ್ಟ್ ಮಡಿಕೇರಿ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮ, ಗೋಣಿಕೊಪ್ಪ ರೋಟರಿ ಕ್ಲಬ್, ಗೋಣಿಕೊಪ್ಪ ವಾಹನ ಚಾಲಕರ ಸಂಘ , ಗೋಣಿಕೊಪ್ಪ ಆಟೋ ಚಾಲಕರ ಸಂಘ ಮತ್ತು ಪೊನ್ನಂಪೇಟೆ ಆಟೋ ಚಾಲಕರ ಸಂಘದ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದ ಅವರು ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರಕ್ತದ ಅಭಾವದಿಂದ ಸಾವು ಸಂಭವಿಸದಂತೆ ರಕ್ತ ಶೇಖರಿಸಿಡುವವರಿಗೆ ಸಹಕಾರ ನೀಡುವುದು ಎಲ್ಲರ ಕರ್ತವ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ರಕ್ತ ನಿಧಿ ಕೇಂದ್ರದ ಡಾ.ಕೆ.ಪಿ ಕರುಂಬಯ್ಯ ಮಾತನಾಡಿ ಶೇಖರಿಸಿದ ರಕ್ತವನ್ನು ರೋಗಿಗಳ ಅವಶ್ಯಕತೆಗೆ ತಕ್ಕಂತೆ ವಿಂಗಡಿಸಿ ಶೇಖರಿಸಿ ಬೇಕಾದ ಸಂಧರ್ಭದಲ್ಲಿ ವಿತರಿಸುವ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವಾಮಿ ವಿವೇಕಾನಂದ ಯೂತ್ ಮೂಮ್‍ಮೆಂಟಿನ ಸಮುದಾಯ ಆರೊಗ್ಯ ಕಾರ್ಯಕ್ರಮಗಳ ಮುಖ್ಯಸ್ಥ ಡಾ. ಡೆನ್ನಿಸ್ ಚೌಹಾನ್, ತುರ್ತು ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಹಲವಾರು ಬಾರಿ ತೊಂದರೆಗಳನ್ನು ಅನುಭವಿಸಬೇಕಾಯಿತು. ಆ ಕಾರಣದಿಂದಲೇ ತಾವು ಸಂಸ್ಥೆಯ ವತಿಯಿಂದ ಎಲ್ಲ ಸಂಘ ಸಂಸ್ಥೆಗಳ ಸಹಕಾರದಿಂದ ಈ ಕಾರ್ಯಕ್ರಮ ನಡೆಸುತಿರುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಸ್ವಾಮಿ ಪರಹಿತಾನಂದ ಮಹರಾಜ್, ಶ್ರೀ ರಾಮಕೃಷ್ಣ ಆಶ್ರಮದ ಆಸ್ಪತ್ರೆಯ ಡಾ. ವಿಕಾಸ್ ಮಂಡಲ್, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಕೋಶಾಧಿಕಾರಿ ಗೋಣಿಕೊಪ್ಪಲಿನ ಡಾ. ಕೆ ಚಂದ್ರಶೇಖರ್, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಗೋಣಿಕೊಪ್ಪಲು ರೋಟರಿ ಕ್ಲಬ್‍ನ ಅಧ್ಯಕ್ಷೆ ಮೂಕಳೇರ ಬೀಟಾ ಲಕ್ಷಣ್, ಕಾರ್ಯದರ್ಶಿ ಕೆ.ಸಿ.ಮುತ್ತಪ್ಪ, ಯೂತ್ ಮೂವಮೆಂಟಿನ ಡಾ ವಿಶ್ವೇಶ್ ವಿಷುÐನಾಯಕ್, ವೆಂಕಟಸ್ವಾಮಿ, ಅಂಕಾಚಾರಿ, ಅನಂತ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ರಕ್ತದಾನ ಶಿಬಿರದಲ್ಲಿ 70 ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು. ಪ್ರತಿದಾನಿಗೆ ಸಂಘ ಸಂಸ್ಥೆಗಳ ಸಹಕಾರದಿಂದ ಎಳನೀರು, ಹಣ್ಣು ಹಂಪಲು ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಸಂಸ್ಥೆಯ ಶಾಲಿನಿ ಸ್ವಾಗತಿಸಿ, ಗಾಯತ್ರಿ ನಿರೂಪಿಸಿದರು, ಕೃತಿ ವಂದಿಸಿದರು.

error: Content is protected !!