ಕೆಂಬಟ್ಟಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ನವ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ : ಅಂಚೆ ಅಧೀಕ್ಷಕ ಸೋಮಯ್ಯ

December 16, 2020

ಮಡಿಕೇರಿ ಡಿ.16 : ಇಂದಿನ ವೈಜ್ಞಾನಿಕ ಯುಗದಲ್ಲಿ ನವ ಸಮಾಜದ ಅಭ್ಯುದಯ ಹಾಗೂ ನಿರ್ಮಾಣಕ್ಕೆ ಶಿಕ್ಷಣ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಭವಿಷ್ಯಕ್ಕೆ ತಕ್ಕಂತೆ ಶಿಕ್ಷಣವನ್ನು ಪಡೆದುಕೊಳ್ಳುವಂತಾಗಬೇಕು ಎಂದು ಕೊಡಗು ಜಿಲ್ಲಾ ಅಂಚೆ ಇಲಾಖೆಯ ಅಧೀಕ್ಷಕ ಉಮ್ಮಣಕುಟ್ಟಡ ಸೋಮಯ್ಯ ಕಿವಿಮಾತು ಹೇಳಿದ್ದಾರೆ.
ಕೊಡಗು ಕೆಂಬಟ್ಟಿ ಅಭಿವೃದ್ಧಿ ಸಮಾಜದ ವತಿಯಿಂದ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಜನಾಂಗದ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ವಿರಾಜಪೇಟೆಯ ಉಡುಪಿ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೋಮಯ್ಯ ಅವರು ಇಂದು ಶಿಕ್ಷಣದೊಂದಿಗೆ ವೃತ್ತಿಪರ ಕೋರ್ಸ್‍ಗಳು ಹಾಗೂ ಉನ್ನತ ಮಟ್ಟದ ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಬರೆಯುವಂತಾಗಬೇಕು, ಇದಕ್ಕೆ ಪೋಷಕರು ಸಹಕಾರ ನೀಡುವಂತಾಗಬೇಕು. ಯಾವುದೇ ಸಂಕಷ್ಟದ ಪರಿಸ್ಥಿತಿಯಲ್ಲೂ ಶಿಕ್ಷಣವನ್ನು ಮೊಟಕುಗೊಳಿಸದೆ ಜನಾಂಗ ಹಾಗೂ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಉಪನ್ಯಾಸಕಿ ಡಾ.ಬೊಡುಕುಟ್ಟಡ ರಾಧಿಕ ಮಾತನಾಡಿ, ಶಿಕ್ಷಣ ಎನ್ನುವುದು ಮಾನವನ ಬುದ್ಧಿ ಮತ್ತು ಮನಸ್ಸಿಗೆ ಸಿಗುವ ಸಂಸ್ಕಾರವಾಗಿದೆ ಎಂದರು. ಸಂಸ್ಕಾರವನ್ನು ಸಮಯಕ್ಕೆ, ಸಂದರ್ಭಕ್ಕೆ ತಕ್ಕಂತೆ ಅನುಭವಿಸಿದರೆ ಮಾತ್ರ ಹೆಚ್ಚಿನ ಗೌರವ, ಮಹತ್ವ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಹಣ, ಆಸ್ತಿಗಿಂತಲೂ ಮಹತ್ವವನ್ನು ಪಡೆದುಕೊಂಡಿರುವ ಶಿಕ್ಷಣ ದೇಶದ ಪ್ರಗತಿಯಲ್ಲೂ ಮಹತ್ವವನ್ನು ಸಾಧಿಸಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಹಿಂದುಳಿದ ವರ್ಗಗಳ ಇಲಾಖೆಯ ನಿವೃತ್ತ ತಾಲ್ಲೂಕು ಕಲ್ಯಾಣಾಧಿಕಾರಿ ದೊಡ್ಡಕುಟ್ಟಡ ರಾಮು ಅಯ್ಯಪ್ಪ, ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಧಾರದಿಂದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಸಮುದಾಯದವರೆಲ್ಲರೂ ಉನ್ನತ ಶಿಕ್ಷಣ ಮತ್ತು ಗುಣಮಟ್ಟದ ಬದುಕನ್ನು ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು. ಪ್ರತಿಯೋರ್ವ ವಿದ್ಯಾರ್ಥಿ ಸಂವಿಧಾನದ ಬಗ್ಗೆ ಅರಿವನ್ನು ಮೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅತಿಥಿಗಳು ಗೌರವ ಅರ್ಪಿಸಿದರು. ಅಧಿಕ ಅಂಕಗಳಿಸಿದ ಜನಾಂಗದ 25 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪ್ರಶಂಸನಾ ಪತ್ರ ಮತ್ತು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾಜದ ಉಪಾಧ್ಯಕ್ಷ ಮೊಟ್ಟಕುಟ್ಟಡ ಬೋಜಮ್ಮಮುತ್ತಣ್ಣ ಉಪಸ್ಥಿತರಿದ್ದರು. ಬಣ್ಣಕುಟ್ಟಡ ಅನುಪಮ, ಕಾವೇರಮ್ಮ, ಪೊನ್ನಮ್ಮ ಪ್ರಾರ್ಥಿಸಿದರು. ಸಮಾಜದ ಕಾರ್ಯದರ್ಶಿ ಮೊಳ್ಳೆಕುಟ್ಟಂಡ ದಿನು ಬೋಜಪ್ಪ ನಿರೂಪಿಸಿ, ವಂದಿಸಿದರು.

error: Content is protected !!